ನ.26ಕ್ಕೆ ಗ್ರಾಮೀಣ ಕರ್ನಾಟಕ ಬಂದ್‍ಗೆ ರೈತ ಸಂಘಟನೆಗಳ ಕರೆ
ಬೆಂಗಳೂರು, ನ.9: ಕೇಂದ್ರ ಸರಕಾರದ ಕೃಷಿ ವಿರೋಧಿ ತಿದ್ದುಪಡಿ ಕಾಯ್ದೆಗಳು ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ, ಎಪಿಎಂಪಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ(AIKSCC) ನ.26 ರಂದು ಗ್ರಾಮೀಣ ಕರ್ನಾಟಕ ಬಂದ್‍ಗೆ ಕರೆ ನೀಡಿದೆ.
ಕೇಂದ್ರ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ (ಉತ್ತೇಜನ ಹಾಗು ಬೆಂಬಲ) ಕಾಯ್ದೆ– 2020, ಬೆಲೆ ಭರವಸೆ (ಸಶಕ್ತೀಕರಣ ಹಾಗು ಸುರಕ್ಷೆ) ಮತ್ತು ಕೃಷಿ ಸೇವೆಗಳ ಕಾಯ್ದೆ– 2020, ಅಗತ್ಯ ವಸ್ತುಗಳ ಕಾಯ್ದೆ (ತಿದ್ದುಪಡಿ)-2020, ವಿದ್ಯುತ್ ಕಾಯ್ದೆ (ತಿದ್ದುಪಡಿ)-2020 ಹಾಗೂ ರಾಜ್ಯ ಸರಕಾರದ ಕಾಯ್ದೆಗಳನ್ನು ಖಂಡಿಸಿ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳ ಜಾರಿಗೆ ಆಗ್ರಹಿಸಿ ರೈತ ಸಂಘಟನೆಗಳು ಬೀದಿಗಿಳಿಯಲಿವೆ.
ನ.26 ರಂದು ರಾಜ್ಯದ ಸರಿಸುಮಾರು 1000 ಕ್ಕೂ ಹೆಚ್ಚು ಮುಖ್ಯ ಕೇಂದ್ರಗಳಲ್ಲಿ `ರಸ್ತೆ ತಡೆ ಚಳುವಳಿ’ `ಬಹಿರಂಗ ಸಭೆ’ `ಪ್ರತಿಭಟನೆ’ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೃಷಿ ಕೂಲಿಕಾರರು ಭಾಗವಹಿಸಬೇಕು ಎಂದು ರೈತ ಸಂಘಟನೆಗಳು ಮನವಿ ಮಾಡಿವೆ.
ಕೇಂದ್ರ ಕಾರ್ಮಿಕ ಸಂಘಟನೆಗಳು ನಾಯಕತ್ವದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಮುಷ್ಕರದ ಭಾಗವಾಗಿ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಬೀದಿಗಿಳಿಯುತ್ತಿವೆ. ಕಾರ್ಷಿಕ ಬಿಕ್ಕಟ್ಟಿನ ಫಲವಾಗಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ, ಕೊರೋನ ಮತ್ತು ಲಾಕ್‍ಡೌನ್ ಈ ಬಿಕ್ಕಟ್ಟನ್ನು ಮತ್ತಷ್ಟು ಬಿಗಾಡಾಯಿಸಿದೆ. ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿಕಾರರು ಮತ್ತಿತರೆ ದುಡಿಯುವ ವರ್ಗದ ಜನತೆಯ ನೆರವಿಗೆ ಧಾವಿಸುವುದರ ಬದಲು ಸನ್ನಿವೇಶದ ದುಲಾರ್ಭವನ್ನು ಪಡೆದು `ಕೃಷಿ ಭೂಮಿ’, `ಕೃಷಿ ಉತ್ಪಾದನೆ’, `ಕೃಷಿ ಮಾರುಕಟ್ಟೆ’, `ಚಿಲ್ಲರೆ ವ್ಯಾಪಾರ’ ಹಾಗು `ವಿದ್ಯುತ್’ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರ ಪರಸ್ಪರ ಪೈಪೋಟಿಯಲ್ಲಿ ಹೊಸ ಹೊಸ ಕಾಯ್ದೆಗಳನ್ನು ರೂಪಿಸುತ್ತಿವೆ.
ಸಾರ್ವಜನಿಕ ಸಂಸದೀಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ, ಸಂಸತ್ತು, ವಿಧಾನ ಮಂಡಳಗಳ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾ ಯಾವುದೇ ಚರ್ಚೆಗಳಿಲ್ಲದೆ ಈ ಕಾನೂನುಗಳನ್ನು ಜಾರಿ ಮಾಡುತ್ತಿದೆ. ಕಾರ್ಪೋರೇಟ್ ಕಂಪನಿಗಳನ್ನು ತೃಪ್ತಿ ಪಡಿಸುವ ಭರದಲ್ಲಿ ಸಂವಿಧಾನದ ಮೂಲ ತತ್ವಗಳನ್ನೂ ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಅಪಾದಿಸಿದ್ದಾರೆ.







