ಬೈಡನ್ರನ್ನು ಅಭಿನಂದಿಸಿದ ಜಾರ್ಜ್ ಡಬ್ಲ್ಯು ಬುಶ್
ಚುನಾವಣೆ ನ್ಯಾಯೋಚಿತವಾಗಿತ್ತು ಎಂದ ಮಾಜಿ ಅಧ್ಯಕ್ಷ

ಜಾರ್ಜ್ ಡಬ್ಲ್ಯು ಬುಶ್
ವಾಶಿಂಗ್ಟನ್, ನ. 9: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ರವಿವಾರ ನಿಯೋಜಿತ ಅಧ್ಯಕ್ಷ ಜೋ ಬೈಡನ್ರನ್ನು ಅಭಿನಂದಿಸಿದ್ದಾರೆ. ‘‘ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಉತ್ತಮ ವ್ಯಕ್ತಿಯಾಗಿದ್ದು, ನಮ್ಮ ದೇಶವನ್ನು ಒಗ್ಗೂಡಿಸಿ ಮುನ್ನಡೆಸುವ ಅವಕಾಶವನ್ನು ಗೆದ್ದುಕೊಂಡಿದ್ದಾರೆ’’ ಎಂದು ಅವರು ಬಣ್ಣಿಸಿದ್ದಾರೆ.
ರಿಪಬ್ಲಿಕನ್ ಪಕ್ಷದಿಂದ ಎರಡು ಬಾರಿ ಅಧ್ಯಕ್ಷರಾಗಿರುವ ಬುಶ್ ಡಲ್ಲಾಸ್ನಲ್ಲಿರುವ ತನ್ನ ಅಧ್ಯಕ್ಷೀಯ ಕೇಂದ್ರದಿಂದ ಹೇಳಿಕೆಯೊಂದನ್ನು ಹೊರಡಿಸಿ, ಏಳು ಕೋಟಿ ಮತಗಳನ್ನು ಗಳಿಸುವ ಮೂಲಕ ಮಾಡಿರುವ ‘ಅಮೋಘ ರಾಜಕೀಯ ಸಾಧನೆ’ಗಾಗಿ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನೂ ಅಭಿನಂದಿಸಿದ್ದಾರೆ.
ಇದರೊಂದಿಗೆ ಬುಶ್, ಬೈಡನ್ ವಿಜಯವನ್ನು ಅನುಮೋದಿಸಿದ ಮೊದಲ ಪ್ರಭಾವಿ ರಿಪಬ್ಲಿಕನ್ ನಾಯಕರಾಗಿದ್ದಾರೆ.
‘‘ಈ ಚುನಾವಣೆಯು ಪ್ರಾಥಮಿಕವಾಗಿ ನ್ಯಾಯೋಚಿತವಾಗಿತ್ತು, ಅದರ ಪಾವಿತ್ರತೆಯು ಸಾಬೀತಾಗಲಿದೆ ಹಾಗೂ ಅದರ ಫಲಿತಾಂಶವು ಸ್ಪಷ್ಟವಾಗಿದೆ’’ ಎಂದು ಬುಶ್ ಹೇಳಿದರು.
ಮತಗಳ ಮರು ಎಣಿಕೆಗೆ ಮನವಿ ಮಾಡುವ ಹಾಗೂ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರ ಟ್ರಂಪ್ಗೆ ಇದೆ ಎಂದೂ ಅವರು ಹೇಳಿದರು.
ಇತರ ರಿಪಬ್ಲಿಕನ್ ನಾಯಕರಿಂದ ಅಭಿನಂದನೆ
ಜಾರ್ಜ್ ಬುಶ್ರ ಸಹೋದರ ಜೇಬ್ ಬುಶ್ ಈಗಾಗಲೇ ಬೈಡನ್ರನ್ನು ಅಭಿನಂದಿಸಿದ್ದಾರೆ. ಜೇಬ್ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಬಯಸಿದ್ದರು. ಆದರೆ, ಆ ಅವಕಾಶವನ್ನು ಬಳಿಕ ಟ್ರಂಪ್ ಪಡೆದುಕೊಂಡರು.
ರಿಪಬ್ಲಿಕನ್ ಸೆನೆಟರ್ಗಳಾದ ಯುಟಾ ರಾಜ್ಯದ ಮಿಟ್ ರಾಮ್ನಿ ಮತ್ತು ಅಲಾಸ್ಕ ರಾಜ್ಯದ ಲೀಸಾ ಮರ್ಕೋವ್ಸ್ಕಿ ಕೂಡ ಬೈಡನ್ರನ್ನು ಅಭಿನಂದಿಸಿದ್ದಾರೆ.
ಫಲಿತಾಂಶ ಸ್ವೀಕರಿಸುವಂತೆ ಟ್ರಂಪ್ಗೆ ಮೆಲಾನಿಯಾ ಮನವಿ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪಲಿತಾಂಶವನ್ನು ಸ್ವೀಕರಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮನವಿ ಮಾಡಿರುವ ಅವರ ಆಂತರಿಕ ಬಳಗದ ಸದಸ್ಯರ ಪಟ್ಟಿಗೆ ಅವರ ಪತ್ನಿ ಹಾಗೂ ದೇಶದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸೇರ್ಪಡೆಗೊಂಡಿದ್ದಾರೆ.
ಚುನಾವಣೆಯ ಬಗ್ಗೆ ಮೆಲಾನಿಯಾ ಸಾರ್ವಜನಿಕವಾಗಿ ಹೇಳಿಕೆ ನೀಡಿಲ್ಲವಾದರೂ, ಅವರು ಖಾಸಗಿಯಾಗಿ ತನ್ನ ಗಂಡನಿಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಟ್ರಂಪ್ರ ಅಳಿಯ ಹಾಗೂ ಹಿರಿಯ ಸಲಹೆಗಾರ ಜ್ಯಾರೆಡ್ ಕಶ್ನರ್, ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳುವಂತೆ ಟ್ರಂಪ್ಗೆ ಈಗಾಗಲೇ ಸಲಹೆ ನೀಡಿದ್ದಾರೆ ಎನ್ನಲಾಗಿದೆ.







