ಪ್ರೊ.ಅಶೋಕ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎನ್ಎಸ್ಯುಐ ಧರಣಿ
![ಪ್ರೊ.ಅಶೋಕ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎನ್ಎಸ್ಯುಐ ಧರಣಿ ಪ್ರೊ.ಅಶೋಕ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎನ್ಎಸ್ಯುಐ ಧರಣಿ](https://www.varthabharati.in/sites/default/files/images/articles/2020/11/9/266804-1604944365.jpg)
ಬೆಂಗಳೂರು, ನ. 9: ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಶೋಕ್ ಕುಮಾರ್ ಆತ್ಮಹತ್ಯೆಯ ಹಿಂದೆ ರಾಜ್ಯ ಸರಕಾರದ ಕೈವಾಡವಿದೆ ಎಂದು ಆರೋಪಿಸಿ ಎನ್ಎಸ್ಯುಐ ಕಾರ್ಯಕರ್ತರು ಇಲ್ಲಿನ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರಕಾರ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಇಲ್ಲಿನ ಕಾಂಗ್ರೆಸ್ ಭವನದ ಬಳಿ ಎನ್ಎಸ್ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಕಾರ್ಯಕರ್ತರು, ವಿಶ್ವ ವಿದ್ಯಾಲಯಗಳ ಉಪಕುಲಪತಿಗಳ ನೇಮಕದಲ್ಲಿ ಭ್ರಷ್ಟಾಚಾರ ನಡೆದಿದ್ದು, ಆ ಹಿನ್ನೆಲೆಯಲ್ಲಿ ಪ್ರೊ.ಅಶೋಕ್ ಕುಮಾರ್ ಅವರ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯವಿದೆ ಎಂದು ಸಂದೇಹ ವ್ಯಕ್ತಪಡಿಸಿದರು.
ಪ್ರೊ.ಅಶೋಕ್ ಕುಮಾರ್ ಆತ್ಮಹತ್ಯೆ ಪ್ರಕರಣದ ಬಗ್ಗೆ ವಿದ್ಯಾರ್ಥಿಗಳು ಮತ್ತು ಅವರ ಸಹೋದ್ಯೋಗಿಗಳೇ ಸಂಶಯ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು, ಉಪಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ವಿವಿಗಳ ಕುಲಪತಿ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಾರೆಂದು ದೂರಿದರು.
ಪ್ರೊ.ಅಶೋಕ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ವಹಿಸದಿದ್ದರೆ ಎನ್ಎಸ್ಯುಐ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ ಕಾರ್ಯಕರ್ತರು, ಪ್ರೊ.ಕುಮಾರ್ ಆತ್ಮಹತ್ಯೆಗೆ ಮೂಲ ಕಾರಣವೇನು? ಇದರ ಹಿಂದೆ ಯಾರಿದ್ದಾರೆ? ಕುಲಪತಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.