ಕೋವಿಡ್ ಲಸಿಕೆ 90 ಶೇ. ಪರಿಣಾಮಕಾರಿ: ಫೈಝರ್ ಘೋಷಣೆ

ವಾಶಿಂಗ್ಟನ್, ನ. 9: ಫೈಝರ್ ಮತ್ತು ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯು, ಪ್ರಸಕ್ತ ನಡೆಯುತ್ತಿರುವ ಮೂರನೇ ಹಂತದ ಪ್ರಯೋಗದಲ್ಲಿ ಕೋವಿಡ್-19 ಸೋಂಕನ್ನು ಗುಣಪಡಿಸುವಲ್ಲಿ 90 ಶೇಕಡ ಪರಿಣಾಮಕಾರಿಯಾಗಿದೆ ಎಂದು ಕಂಪೆನಿಗಳು ಸೋಮವಾರ ಘೋಷಿಸಿವೆ.
ಈ ಸುದ್ದಿಯ ಬೆನ್ನಿಗೇ ಯುರೋಪ್‌ನ ಶೇರು ಮಾರುಕಟ್ಟೆಗಳು ಮೇಲಕ್ಕೆ ಜಿಗಿದಿವೆ ಹಾಗೂ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.
ಕೊರೋನ ವೈರಸ್ ಸೋಂಕಿತರಿಗೆ ಈ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ಮೊದಲ ಡೋಸನ್ನು ನೀಡಿದ 28 ದಿನಗಳ ಬಳಿಕ ಹಾಗೂ ಎರಡನೇ ಡೋಸನ್ನು ನೀಡಿದ 7 ದಿನಗಳ ಬಳಿಕ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಪ್ರಾಥಮಿಕ ಅಂಕಿಅಂಶಗಳು ತಿಳಿಸಿವೆ.
‘‘ನಮ್ಮ ಕೋವಿಡ್-19 ಲಸಿಕೆಯ ಮೂರನೇ ಹಂತದ ಪ್ರಯೋಗದ ಮೊದಲ ಹಂತದ ಫಲಿತಾಂಶಗಳು, ನಮ್ಮ ಲಸಿಕೆಯು ಕೋವಿಡ್-19 ಸಾಂಕ್ರಾಮಿಕವನ್ನು ಗುಣಪಡಿಸುವುದನ್ನು ಖಾತರಿಪಡಿಸಿವೆ’’ ಎಂದು ಫೈಝರ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಬೋರ್ಲ ಹೇಳಿಕೆಯೊಂದರಲ್ಲಿ ತಿಳಿಸಿದರು.
ಭರವಸೆಯ ಸುದ್ದಿ: ಬೈಡನ್
ಫೈಝರ್ ಮತ್ತು ಬಯೋಎನ್‌ಟೆಕ್ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯು 90 ಶೇಕಡ ಪರಿಣಾಮಕಾರಿಯಾಗಿದೆ ಎಂಬ ಸುದ್ದಿಯು ಭರವಸೆದಾಯಕವಾಗಿದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಸೋಮವಾರ ಹೇಳಿದರು. ಆದರೆ, ಸುದೀರ್ಘ ಹೋರಾಟ ನಮ್ಮ ಮುಂದಿದೆ ಎಂದು ಅವರು ಎಚ್ಚರಿಸಿದರು.
ಅತ್ಯಂತ ಶುಭ ಸುದ್ದಿ: ಟ್ರಂಪ್
ಫೈಝರ್ ಮತ್ತು ಬಯೋಎನ್‌ಟೆಕ್ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯು 90 ಶೇಕಡ ಪರಿಣಾಮಕಾರಿಯಾಗಿದೆ ಎನ್ನುವುದು ಅತ್ಯಂತ ಶುಭ ಸುದ್ದಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
‘‘ಶೇರು ಮಾರುಕಟ್ಟೆಗಳು ಏರಿವೆ, ಲಸಿಕೆ ಶೀಘ್ರದಲ್ಲೇ ಬರುತ್ತಿದೆ, ಅದು 90 ಶೇಕಡ ಪರಿಣಾಮಕಾರಿ. ಎಂಥ ಶುಭ ಸುದ್ದಿ!’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.







