ಮಹಿಳಾ ಟಿ-20 ಚಾಲೆಂಜ್: ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟ್ರೇಲ್‌ಬ್ಲೇಝರ್ಸ್

ಶಾರ್ಜಾ: ಮಹಿಳೆಯರ ಟಿ-20 ಚಾಲೆಂಜ್ ಫೈನಲ್ ನಲ್ಲಿ ಸೂಪರ್ ನೋವಾಸ್ ತಂಡವನ್ನು ಮಣಿಸಿದ ಸ್ಮೃತಿ ಮಂದಾನ ನಾಯಕತ್ವದ ಟ್ರೇಲ್‌ಬ್ಲೇಝರ್ಸ್ ತಂಡವು ಮೊದಲ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಟ್ರೇಲ್‌ಬ್ಲೇಝರ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 118/8 ರನ್ ಕಲೆ ಹಾಕಿತು. ಟ್ರೇಲ್‌ಬ್ಲೇಝರ್ಸ್ ನಾಯಕಿ ಸ್ಮೃತಿ ಮಂದಾನ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಅವರು 49 ಎಸೆತಗಳಲ್ಲಿ 67 ರನ್ ಗಳಿಸಿ ಔಟಾದರು. ಡೊಟ್ಟಿನ್ 20, ರಿಚಾ ಘೋಷ್ 10 ರನ್ ಬಾರಿಸಿದರು.
ಸೂಪರ್ ನೋವಾಸ್ ಪರ ರಾಧಾ ಯಾದವ್ ಮಾರಕ ದಾಳಿ ನಡೆಸಿ ಐದು ವಿಕೆಟ್ ಕಬಳಿಸಿದರು.
ಟ್ರೇಲ್‌ಬ್ಲೇಝರ್ಸ್ ನೀಡಿದ 119 ರನ್ ಗಳ ಸುಲಭ ಗುರಿ ಬೆನ್ನತ್ತಿದ ಸೂಪರ್ ನೋವಾಸ್ ತಂಡವು 102 ರನ್ ಗಳಿಸಲಷ್ಟೇ ಶಕ್ತವಾಗಿ 16 ರನ್ ಗಳಿಂದ ಸೋತಿತು. ನಾಯಕಿ ಹರ್ಮನ್ ಪ್ರೀತ್ ಕೌರ್ 30 ರನ್ ಗಳಿಸಿದರು. ಟ್ರೇಲ್‌ಬ್ಲೇಜರ್ಸ್ ಪರ ಸಲ್ಮಾ ಖಾತುನ್ 3, ದೀಪ್ತಿ ಶರ್ಮಾ 2 ವಿಕೆಟ್ ಪಡೆದರು.
ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಸೂಪರ್ ನೋವಾಸ್ ಹಾಗೂ ಟ್ರೇಲ್‌ಬ್ಲೇಜರ್ ನಡುವಿನ ಪಂದ್ಯದಲ್ಲಿ ಸ್ಮೃತಿ ಮಂದಾನ ಪಡೆ ಜಯ ಸಾಧಿಸಿತು. ಈ ಮೂಲಕ ಮೊದಲ ಬಾರಿ ಮಹಿಳೆಯರ ಟಿ-20 ಚಾಲೆಂಜ್ ನಲ್ಲಿ ಚಾಂಪಿಯನ್ ಎನಿಸಿಕೊಂಡಿದೆ. ಸ್ಮೃತಿ ಮಂದಾನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







