ಭಾರತಕ್ಕೆ ಆರು ತಿಂಗಳಲ್ಲಿ ಬೇಕು ಆರು ಕೋಟಿ ಕೋವಿಡ್ ಲಸಿಕೆ ಸೀಸೆ
ಹೊಸದಿಲ್ಲಿ, ನ.10: ದೇಶದಲ್ಲಿ ಕೋವಿಡ್-19 ವಿರುದ್ಧದ ಲಸಿಕೆ ಉತ್ಪಾದಿಸಲು ಫಾರ್ಮಾ ಕಂಪೆನಿಗಳು ಸಜ್ಜಾಗಿರುವ ನಡುವೆಯೇ ಮೊದಲ ಆರು ತಿಂಗಳಲ್ಲಿ ಕೋವಿಡ್-19 ಲಸಿಕೆ ಪ್ಯಾಕ್ ಮಾಡಲು 6.10 ಕೋಟಿ ಲಸಿಕೆ ಸೀಸೆಗಳ ಅಗತ್ಯವಿದೆ. ತಕ್ಷಣದ ಅಗತ್ಯತೆಯನ್ನು ಪೂರೈಸಲು ಸಾಕಷ್ಟು ದಾಸ್ತಾನು ಇದೆ ಎಂದು ಫಾರ್ಮಾ ಕಂಪೆನಿಗಳು ಹೇಳಿಕೊಂಡಿವೆ.
ಹೆಚ್ಚುವರಿಯಾಗಿ 9.3 ಕೋಟಿ ಸೀಸೆಗಳನ್ನು ಮುಂದಿನ ಆರು ತಿಂಗಳಲ್ಲಿ ಉತ್ಪಾದಿಸಲಾಗುತ್ತಿದೆ. ಮತ್ತೆ ಕೆಲವು ಸೀಸೆ ಉತ್ಪಾದನಾ ಕಂಪೆನಿಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉದ್ದೇಶಿಸಿವೆ ಎಂದು ಉನ್ನತ ಮೂಲಗಳು ಹೇಳಿವೆ.
ಕೋವಿಡ್-19ಗೆ ಲಸಿಕೆಯನ್ನು ಜಾರಿಗೊಳಿಸುವ ಸಂಬಂಧ ನೇಮಕ ಮಾಡಿರುವ ರಾಷ್ಟ್ರೀಯ ತಜ್ಞರ ತಂಡ, ಪೂರೈಕೆ ಮತ್ತು ಸಾಗಣೆ ಸರಣಿಯನ್ನು ಪರಿಶೀಲಿಸಿದ್ದು, ಸಂಭಾವ್ಯ ಬೇಡಿಕೆ, ಇನ್ವೆಂಟರಿ, ಬಿಡಿಭಾಗಗಳ ಸಾಮರ್ಥ್ಯ ಮತ್ತು ಕಂಪೆನಿಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಳದ ನೀಲಿನಕ್ಷೆಯನ್ನು ಸಿದ್ಧಪಡಿಸಿದೆ.
ಲಸಿಕೆ ಉತ್ಪಾದನಾ ಕಂಪೆನಿಗಳ ಜತೆ ಮತ್ತು ಸೀಸೆ ಉತ್ಪಾದಕರ ಜತೆ ಮಾತುಕತೆ ನಡೆಸಿದ ಬಳಿಕ ಯೋಜನೆ ರೂಪಿಸಲಾಗಿದೆ. 2021ರ ಆರಂಭದಲ್ಲಿ ಲಸಿಕೆ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಸರ್ವಸನ್ನದ್ಧವಾಗಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಕ್ಯಾಡಿಲಾ ಒಟ್ಟಾಗಿ ಮುಂದಿನ ಆರು ತಿಂಗಳಲ್ಲಿ 6.10 ಕೋಟಿ ಸೀಸೆಗಳು ಬೇಕಾಗಬಹುದು ಎಂಬ ಅಂದಾಜು ನೀಡಿವೆ. ಬೇಡಿಕೆ ಪೂರೈಸಲು ತಮ್ಮ ಬಳಿ ಸಾಕಷ್ಟು ದಾಸ್ತಾನು ಇದೆ ಎಂದು ಹೇಳಿವೆ. ಸ್ಕಾಟ್ಕಿಶಾ, ಸೈಂಟ್ ಗೊಬಿಯಾನ್, ಬೊರೊಸಿಲ್ ಕ್ಲಾಸ್ಪ್ಯಾಕ್ ಮತ್ತು ಜರೆಶ್ಮಿಯರ್ ಇಂಡಿಯಾ ಪ್ರಮುಖ ಸೀಸೆ ಉತ್ಪಾದನಾ ಕಂಪೆನಿಗಳಾಗಿವೆ.