ಉಡುಪಿ : ನ.12ರಂ ವಿಭಾಗ ಮಟ್ಟದ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗ
ಉಡುಪಿ, ನ.11: ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯನ್ನೊ ಳಗೊಂಡ ಮಂಗಳೂರು ವಿಭಾಗ ಮಟ್ಟದ ಜಿಲ್ಲಾ ಪ್ರಮುಖರ ಪ್ರಶಿಕ್ಷಣ ವರ್ಗ ನಾಳೆ ನ.12ರಂದು ಇಡೀ ದಿನ ಉಡುಪಿಯಲ್ಲಿ ನಡೆಯಲಿದೆ ಎಂದು ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಕರಾವಳಿ ಬೈಪಾಸ್ ಬಳಿ ಇರುವ ಶಾರದಾ ಇಂಟರ್ನೇಷನಲ್ ಹೊಟೇಲ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಒಂದು ದಿನದ ಈ ಶಿಬಿರವನ್ನು ಉದ್ಘಾಟಿಸ ಲಿದ್ದಾರೆ. ಮೂರು ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯಮಟ್ಟದಲ್ಲಿ ಪ್ರಾರಂಭಗೊಂಡ ಈ ಪ್ರಶಿಕ್ಷಣ ವರ್ಗ, ಜಿಲ್ಲಾ ಮಟ್ಟದಿಂದ ಬೂತ್ ಮಟ್ಟದವರೆಗೂ ನಡೆಯಲಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಪಕ್ಷದ ಇತಿಹಾಸ, ತತ್ವಸಿದ್ಧಾಂತಗಳು, ವಿಚಾರಧಾರೆಗಳು, ಆತ ಮನೆಮನೆಗೆ ತಲುಪಿಸಬೇಕಾದ ವಿಚಾರಗಳ ಕುರಿತು ಮಾಹಿತಿ ನೀಡಿ ಅವರನ್ನು ಸಿದ್ಧಗೊಳಿಸುವುದು ಈ ಪ್ರಶಿಕ್ಷಣ ವರ್ಗದ ಉದ್ದೇಶ. ಇಲ್ಲಿ ತರಬೇತಿ ಪಡೆದ ಜಿಲ್ಲಾ ಪ್ರಮುಖರು, ಅವುಗಳನ್ನು ಮಂಡಲ, ಬೂತ್ ಮಟ್ಟಕ್ಕೆ ತಲುಪಿಸುವರು ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದರು.
ಈ ಪ್ರಶಿಕ್ಷಣ ವರ್ಗದಲ್ಲಿ ವ್ಯಕ್ತಿತ್ವ ವಿಕಸನವೂ ಸೇರಿದಂತೆ ಒಟ್ಟು 10 ವಿಷಯಗಳ ಬಗ್ಗೆ ಅವರಿಗೆ ತಿಳಿಸಿಕೊಡಲಾಗುತ್ತದೆ. ಇವುಗಳಲ್ಲಿ 2014ರ ಸರಕಾರದ ನಂತರ ಬದಲಾದ ಭಾರತದ ರಾಜಕಾರಣ, ಹಿಂದಿನ ಆರು ವರ್ಷಗಳಲ್ಲಿ ನಡೆದ ಅಂತ್ಯೋದಯ ಪ್ರಯತ್ನ, ದೇಶದ ರಕ್ಷಣಾ ಸಾಮರ್ಥ್ಯದ ಜೊತೆಗೆ ಆತ್ಮ ನಿರ್ಬರ ಭಾರತದ ಸಂಕಲ್ಪ, ಪಕ್ಷದ ವಿಚಾರಧಾರೆಯನ್ನು ದೇಶದ ಮುಖ್ಯ ವಿಚಾರಧಾರೆಯಾಗಿಸುವ ಕುರಿತು ಅರಿವು ಮೂಡಿಸಲಾಗುತ್ತದೆ ಎಂದರು.
ಅಲ್ಲದೇ ಪಕ್ಷದ ಸಾಮಾನ್ಯ ಕಾರ್ಯಕರ್ತರೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ತರಬೇತಿ, ನಮ್ಮ ಕಾರ್ಯಪದ್ದತಿ ಮತ್ತು ಸಂಘಟನೆಯ ಸಂರಚನೆಯಲ್ಲಿ ನಮ್ಮ ಪಾತ್ರ, ಬಿಜೆಪಿ ಇತಿಹಾಸ ಮತ್ತು ವಿಕಾಸ, ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ವಿವಿಧ ಪರಿಣತರು ವಿಚಾರಗಳನ್ನು ಮಂಡಿಸಲಿದ್ದಾರೆ ಎಂದರು. ಪ್ರತಿ ಜಿಲ್ಲೆಯಿಂದ 30ರಂತೆ ಜಿಲ್ಲಾ ಹಂತದ ಪ್ರತಿನಿಧಿಗಳು ಭಾಗವಹಿಸಲಿದ್ದು ಒಟ್ಟು 100 ಮಂದಿ ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಕಲ್ಮಾಡಿ, ಪ್ರಶಿಕ್ಷಣಾ ವರ್ಗದ ಸಂಚಾಲಕ ರಘುವೀರ್ ಶೆಣೈ, ಸಹ ಸಂಚಾಲಕ ಸುಬ್ರಹ್ಮಣ್ಯ ಪೈ, ಪಕ್ಷದ ವಕ್ತಾರ ಶಿವಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.