ಬಿಜೆಪಿಯನ್ನು ಇನ್ನಷ್ಟು ಬಲಿಷ್ಠವಾಗಿಸುವುದು ನನ್ನ ಏಕಮೇವ ಉದ್ದೇಶವಾಗಿತ್ತು: ಚಿರಾಗ್

ಪಾಟ್ನಾ,ನ.11: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಕಿಂಗ್ ಮೇಕರ್ ’ಆಗುತ್ತೇನೆ ಎಂಬ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕನಸು ಕಂಡಿದ್ದಷ್ಟೇ ಬಂತು,ಅವರ ಪಕ್ಷವು ರಾಜ್ಯದ 243 ಕ್ಷೇತ್ರಗಳ ಪೈಕಿ ಕೇವಲ ಒಂದರಲ್ಲಿ ಗೆದ್ದಿದ್ದೇ ದೊಡ್ಡ ಸಾಧನೆಯಾಗಿದೆ. ಆದರೆ ತಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ ಎಂದು ಚಿರಾಗ್ ಈಗ ಹೇಳಿಕೊಂಡಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿರಾಗ್,ಈ ಚುನಾವಣೆಯಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಬೇಕು ಎಂದು ತಾನು ಬಯಸಿದ್ದೆ ಮತ್ತು ತನ್ನ ಪಕ್ಷವು ಬೀರಿರುವ ಪರಿಣಾಮವು ತನಗೆ ತೃಪ್ತಿಯನ್ನುಂಟು ಮಾಡಿದೆ ಎಂದು ಹೇಳಿದರು.
‘ಎಲ್ಲ ಪಕ್ಷಗಳಂತೆ ನಾನೂ ಸಾಧ್ಯವಿರುವಷ್ಟು ಸ್ಥಾನಗಳನ್ನು ಗೆಲ್ಲಲು ಬಯಸಬಹುದಿತ್ತು. ಆದರೆ ಬಿಜೆಪಿ ರಾಜ್ಯದಲ್ಲಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮುವಂತೆ ಮಾಡುವುದು ನನ್ನ ಚುನಾವಣಾ ಉದ್ದೇಶವಾಗಿತ್ತು ’ಎಂದರು.
ತಾನು ಬಿಹಾರದಲ್ಲಿ ತನ್ನ ಏಕಾಂಗಿ ಪ್ರಚಾರವನ್ನು ಆರಂಭಿಸಿದಾಗ ತನ್ನ ಪಕ್ಷವು ಬಿಜೆಪಿಯೊಂದಿಗೆ ಸರಕಾರವನ್ನು ರಚಿಸುವಂತಾಗಲು ನಿತೀಶ ಕುಮಾರ ಅವರನ್ನು ಪರಾಭವಗೊಳಿಸುವುದು ಎನ್‌ಡಿಎದಿಂದ ಪ್ರತ್ಯೇಕವಾಗಿ ಸ್ಪರ್ಧಿಸುವ ಹಿಂದಿನ ತನ್ನ ಏಕೈಕ ಅಜೆಂಡಾ ಆಗಿತ್ತು ಎಂದು ಚಿರಾಗ್ ತಿಳಿಸಿದರು.
ಎಲ್‌ಜೆಪಿ ನಿತೀಶ್ ಕುಮಾರ್ ಅವರ ಜೆಡಿಯು ಎದುರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಅದರ ಮತಗಳಿಗೆ ಕನ್ನ ಹಾಕಿದೆ ಎಂದು ವಿಶ್ಲೇಷಿಸಲಾಗಿದೆ.
ಚಿರಾಗ್‌ರಿಂದಾಗಿ ಜೆಡಿಯು ಕನಿಷ್ಠ 20 ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರೂ ಹೇಳಿದ್ದಾರೆ. ಒಟ್ಟಾರೆಯಾಗಿ ಚಿರಾಗ್ ಪಾಸ್ವಾನ್‌ರಿಂದಾಗಿ ಸುಮಾರು 40 ಸ್ಥಾನಗಳನ್ನು ಜೆಡಿಯು ಕಳೆದುಕೊಂಡಿರಬಹುದು.
2015ರ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಯು ಬಲ ಈ ಚುನಾವಣೆಯಲ್ಲಿ 43 ಸ್ಥಾನಗಳಿಗೆ ಕುಸಿದಿದ್ದರೆ,ಆಗ 53 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈಗ ತನ್ನ ಗಳಿಕೆಯನ್ನು 74ಕ್ಕೆ ಹೆಚ್ಚಿಸಿಕೊಂಡಿದೆ. ನಿತೀಶ್ ಗೆ ಅಡ್ಡಗಾಲು ಹಾಕಲು ಬಿಜೆಪಿಯೇ ಚಿರಾಗ್‌ಗೆ ಅವಕಾಶ ಕಲ್ಪಿಸಿತ್ತು ಎಂಬ ಊಹಾಪೋಹಗಳಿಗೆ ಇದು ಪುಷ್ಟಿ ನೀಡಿದೆ.
ಪಕ್ಷದ ಹೀನಾಯ ಸೋಲಿನ ಕುರಿತು ಸುದ್ದಿಗಾರರ ಪ್ರಶ್ನೆಗೆ ಚಿರಾಗ್,ಸೋಲಿನ ವ್ಯಾಖ್ಯೆ ಏನು?ಎಲ್‌ಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ ಎಂದು ಉತ್ತರಿಸಿದರು.
ಮಿತ್ರಪಕ್ಷ ಎನ್‌ಡಿಎ ಬಗ್ಗೆ ಜೆಡಿಯು ಅಸಮಾಧಾನಗೊಂಡಿದೆ ಎಂದು ಮಂಗಳವಾರ ಸಂದರ್ಶನದಲ್ಲಿ ಸುಳಿವು ನೀಡಿದ್ದ ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಅವರು,ಚಿರಾಗ್ ಪಾಸ್ವಾನ್‌ರನ್ನು ಆರಂಭದಲ್ಲಿಯೇ ಖಂಡಿಸಬೇಕಿತ್ತು ಮತ್ತು ನಿಯಂತ್ರಿಸಬೇಕಿತ್ತು ಎಂದು ಹೇಳಿದ್ದರು.







