ಬಿಹಾರ ಚುನಾವಣೆಯಲ್ಲಿ ನಾನೇ ನಿಜವಾದ ವಿನ್ನರ್: ತೇಜಸ್ವಿ ಯಾದವ್

ಪಾಟ್ನಾ: "ಜನಾದೇಶ ನಮ್ಮ ಪರವಾಗಿತ್ತು. ಮುಖ್ಯಮಂತ್ರಿ ಕುರ್ಚಿಯಲ್ಲಿ ಬೇರೆ ಯಾರೋ ಇದ್ದರೂ ನಾನೇ ನಿಜವಾದ ವಿನ್ನರ್'' ಎಂದು ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಸರಕಾರವನ್ನು ಕೆಳಿಗಿಳಿಸಲು ವಿಫಲವಾಗಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಅಂಚೆ ಮತದಾನದ ಎಣಿಕೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದ ತೇಜಸ್ವಿ, 20ಕ್ಷೇತ್ರಗಳಲ್ಲಿ ಕಡಿಮೆ ಅಂತರದ ಗೆಲುವು ದಾಖಲಾಗಿದ್ದು ಇದರ ಮರು ಎಣಿಕೆ ಆಗಬೇಕೆಂದು ಆಗ್ರಹಿಸಿದರು.
"ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಹಣಬಲ, ಅಧಿಕಾರ ಬಲ ಪ್ರಯೋಗಿಸಿದರು. ಆದರೆ, ಆರ್‌ಜೆಡಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದನ್ನು ಅವರಿಗೆ ತಡೆಯಲು ಸಾಧ್ಯವಾಗಲಿಲ್ಲ. ನಿತೀಶ್ ಕುಮಾರ್ ಪಕ್ಷ 3ನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದು ಬದಲಾವಣೆಗಾಗಿರುವ ಜನಾದೇಶ. ನಿತೀಶ್ ಕುಮಾರ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತರೆ ನಾವು ಜನರ ಹೃದಯದಲ್ಲಿದ್ದೇವೆ'' ಎಂದು ವಿಪಕ್ಷಗಳ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಸ್ವಿ ಹೇಳಿದರು.
ಮಹಾಘಟಬಂಧನ ಸರಕಾರ ರಚಿಸಲಿದೆ: ಆರ್‌ಜೆಡಿ ಶಾಸಕರಿಗೆ ತೇಜಸ್ವಿ ಭರವಸೆ
ಪಾಟ್ನಾ: ಆರ್‌ಜೆಡಿ ಶಾಸಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ತೇಜಸ್ವಿ ಯಾದವ್, ಮಹಾಘಟಬಂಧನವು ಬಿಹಾರದಲ್ಲಿ ಸರಕಾರ ರಚಿಸಲಿದೆ. ಎಲ್ಲ ಆರ್‌ಜೆಡಿ ಶಾಸಕರು ಒಂದು ತಿಂಗಳ ಕಾಲ ಪಾಟ್ನಾದಲ್ಲೇ ಉಳಿದುಕೊಳ್ಳಬೇಕು. ತಮ್ಮ ಕ್ಷೇತ್ರಗಳಿಗೆ ತೆರಳಬಾರದು. ಎನ್‌ಡಿಎ ಸರಕಾರದಲ್ಲಿ ಎಚ್‌ಎಎಂ ಹಾಗೂ ವಿಐಪಿ ಪಕ್ಷಗಳಿಗೆ ಯಾವ ಸ್ಥಾನಮಾನ ಸಿಗಲಿದೆ ಎಂದು ನಾವು ಕಾದುನೋಡಲಿದ್ದೇವೆ ಎಂದು ಹೇಳಿದರು.
ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿ, ಬಿಹಾರ ಚುನಾವಣೆಯಲ್ಲಿ ಚುನಾವಣಾ ಆಯೋಗದ ಮತ ಎಣಿಕೆ ಪ್ರಕ್ರಿಯೆ ಸರಿ ಇರಲಿಲ್ಲ. ಚುನಾವಣಾ ಆಯೋಗವು ಎನ್‌ಡಿಎ ಪರವಾಗಿಯೇ ಕೆಲಸ ಮಾಡಿದೆ. ಜನತೆ ಮಹಾಘಟಬಂಧನಕ್ಕೆ ಆದ್ಯತೆ ನೀಡಿದರೆ, ಚುನಾವಣಾ ಆಯೋಗ ಎನ್‌ಡಿಎಗೆ ಆದ್ಯತೆ ನೀಡಿತು ಎಂದರು.