ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್

ಕಲಬುರಗಿ, ನ. 13: ಅಧಿಕಾರಕ್ಕಾಗಿ ನಾನು ಯಾರ ಮನೆಯ ಮುಂದೆಯೂ ಹೋಗಿ ನಿಲ್ಲುವುದಿಲ್ಲ. ಯಾರೊಬ್ಬರ ಬಳಿಯೂ ಭಿಕ್ಷೆ ಬೇಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ರೀತಿಯಲ್ಲಿಯೂ ಅಧಿಕಾರ ದಾಹ ಇಲ್ಲ. ಸಚಿವ ಸ್ಥಾನಕ್ಕೆ ಅಥವಾ ಮೇಲ್ಮನೆ ಸದಸ್ಯ ಸ್ಥಾನಕ್ಕಾಗಿ ನಾನು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಮಾಲೀಕಯ್ಯ ಗುತ್ತೇದಾರ್ ಎಂದೂ ಭಿಕ್ಷೆ ಬೇಡೋ ಜಾಯಮಾನದವನಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ನನಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ. ಸದ್ಯಕ್ಕೆ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುತ್ತೇನೆ. ಆದರೆ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಜಿಲ್ಲೆಗೂ ಸಚಿವ ಸ್ಥಾನ ಸಿಗಬೇಕು. ಈ ಭಾಗದವರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು. ಜಿಲ್ಲೆಗೆ ಬಾರದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನೂ ಬದಲಾಯಿಸಬೇಕು ಎಂದು ಮಾಲೀಕಯ್ಯ ಗುತ್ತೇದಾರ್ ಆಗ್ರಹಿಸಿದರು.
ಜಿಲ್ಲೆಯಲ್ಲಿ ಯಾರೂ ಉತ್ತಮವಾಗಿ ಕೆಲಸ ಮಾಡುವರೋ ಅವರಿಗೆ ಉಸ್ತುವಾರಿ ಸ್ಥಾನ ನೀಡಲಿ. ಇಷ್ಟು ದಿನ ಸಚಿವ ಸ್ಥಾನದಲ್ಲಿದ್ದವರನ್ನು ಕೈಬಿಡಲಿ, ಹೊಸಬರಿಗೆ ಸಚಿವ ಸ್ಥಾನದ ಅವಕಾಶ ನೀಡಲಿ ಎಂದ ಮಾಲೀಕಯ್ಯ ಗುತ್ತೇದಾರ್, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ, ಕೇಂದ್ರದಿಂದ ಹೆಚ್ಚಿನ ಪರಿಹಾರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ. ಸರಕಾರ ತಕ್ಷಣವೇ ಮನೆ ಹಾಗೂ ಬೆಳೆ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಬೇಕು ಎಂದರು.
ಯಮಲೋಕದ ಹೊಸ್ತಿಲು ಮುಟ್ಟಿ ಬಂದೆ: ಕೊರೋನ ಸೋಂಕಿಗೆ ಬಲಿಯಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸಿ ಗೆದ್ದು ಬಂದಿರುವೆ. ನಾಲ್ಕೈದು ದಿನ ಯಮಯಾತನೆ ಅನುಭವಿಸಿದೆ. ಒಂದು ರೀತಿಯ ಯಮಲೋಕದ ಹೊಸ್ತಿಲು ಮುಟ್ಟಿ ಹಿಂದಿರುಗಿ ಬಂದಿದ್ದೇನೆ. ಬದುಕುವ ಆಸೆಯೇ ಕಳೆದು ಹೋಗಿತ್ತು. ಹೀಗಾಗಿ ಯಾರೂ ಕೊರೋನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದರು.