ಬಿಜೆಪಿ ನಾಯಕರಿಗೆ ಈರುಳ್ಳಿ, ಟೊಮಾಟೊ ಪಾರ್ಸೆಲ್ ಕಳುಹಿಸಿ ಪ್ರತಿಭಟನೆ: ಪುಷ್ಪಾ ಅಮರನಾಥ್

ಮೈಸೂರು,ನ.13: ರಾಜ್ಯದ ಜನರು ಕೊರೋನ, ಪ್ರವಾಹ ಭೀತಿಯಿಂದ ತತ್ತರಿಸುತ್ತಿದ್ದರೆ ರಾಜ್ಯ ಸರ್ಕಾರ ಮಾತ್ರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದನ್ನು ಖಂಡಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಬಿಜೆಪಿ ನಾಯಕರಿಗೆ ಈರುಳ್ಳಿ, ಟೊಮಾಟೊ, ಸೇರಿದಂತೆ ತರಕಾರಿಗಳನ್ನು ಪಾರ್ಸೆಲ್ ಕಳುಹಿಸುವ ಮೂಲಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಶಾಸಕರು ಮನೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಬೆಲೆ ಏರಿಕೆಯಾದ ತರಕಾರಿಗಳನ್ನು ನೀಡುವುದಾಗಿ ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಧ್ಯಮ ಮತ್ತು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ಬಿಜೆಪಿ ನಾಯಕರಿಗೆ ಸರ್ಕಾರಕ್ಕೆ ತಿಳಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಸಚಿವರು-ಶಾಸಕರ ಮನೆಗೆ ಈರುಳ್ಳಿ, ಆಲೂಗಡ್ಡೆ, ಟೊಮಾಟೊ ಮುಂತಾದ ಬೆಲೆ ಏರಿಕೆಯ ದಿನ ನಿತ್ಯದ ವಸ್ತುಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ವಿಶೇಷ ಪ್ರತಿಭಟನೆ ನಡೆಸಲು ಚಿಂತಿಸಿದೆ ಎಂದು ಮಾಹಿತಿ ನೀಡಿದರು.
ಭಾರತ್ ಮಾತಾಕಿ ಜೈ ಎನ್ನುವ ಶೋಭಾ ಕರಂದ್ಲಾಜೆ ಮಹಿಳಾ ದೌರ್ಜನ್ಯದ ಬಗ್ಗೆ ಮೌನ ಆಗಿರುವುದೇಕೆ ಎಂದು ಪ್ರಶ್ನಿಸಿದ ಅವರು, ಶಾಸಕ ಸಿದ್ದು ಸವದಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಬೇಡದ ವಿಚಾರಕ್ಕೆ ಮೂಗು ತೋರಿಸುತ್ತಾರೆ. ಮಹಿಳೆಯಾಗಿ ಈ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಭಾರತ ಮಾತಾ ಕೀ ಜೈ ಎಂದರೆ ಸಾಕಾಗಲ್ಲ. ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯಗಳಲ್ಲಿ ಮಹಿಳೆ ಮೇಲಿನ ದೌರ್ಜನ್ಯಗಳು ನಡೆಯುತ್ತಿವೆ. ಮಹಾತ್ಮ ಗಾಂಧೀಜಿ ಅವರು ಮಧ್ಯರಾತ್ರಿಯಲ್ಲಿ ಮಹಿಳೆ ಓಡಾಟ ನಡೆಸಿದರೆ ರಾಮರಾಜ್ಯ ಆಗುತ್ತದೆ ಎಂದು ಹೇಳಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಬೆಳಗ್ಗಿನ ಸಮಯದಲ್ಲಿಯೇ ಓಡಾಟ ನಡೆಸುವುದು ಕಷ್ಟವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಕೂಡ ಧ್ವನಿ ಎತ್ತುವುದಿಲ್ಲ ಎಂದು ಹೇಳಿದೆರು.
ಬೆಂಗಳೂರಿನ ಆರ್.ಅರ್. ನಗರ ಮತ್ತು ಶಿರಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿಯವರು ಸಾಕಷ್ಟು ಹಣ ಚೆಲ್ಲಿ ಗೆಲುವು ಸಾಧಿಸಿದ್ದಾರೆ. ನಾನು ಸ್ವತಃ ಆರ್.ಆರ್.ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಜನ ಒಲವು ತೋರಿಸಿದ್ದರು. ಆದರೆ ಚುನಾವಾವಣೆ ನಡೆಯುವ ಎರಡು ಮೂರು ದಿನಗಳಲ್ಲಿ ಬಿಜೆಪಿಯವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಹಣದ ಹೊಳೆಯನ್ನೇ ಹರಿಸಿದ್ದಾರೆ. ಜೆಡಿಎಸ್ ನಿಂದ ಡಮ್ಮಿ ಆಭ್ಯರ್ಥಿಯನ್ನು ಹಾಕುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಜೀಪಿನಲ್ಲಿ ಹಣ ತಂದು ಪೊಲೀಸರ ಮೂಲಕವೇ ಹಂಚಿಸಿದ್ದಾರೆ. ಯಾವ ಯಾವ ರೀತಿಯಲ್ಲಿ ಅಕ್ರಮಗಳನ್ನು ನಡೆಸಬಹುದೊ ಅದನ್ನೆಲ್ಲಾ ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆಂತರಿಕ ಕಚ್ಚಾಟ ಇಲ್ಲ. ಇದೆಲ್ಲಾ ಮಾಧ್ಯಮಗಳ ಮತ್ತು ವಿರೋಧ ಪಕ್ಷಗಳ ಸೃಷ್ಟಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಪುಷ್ಪವಲ್ಲಿ ಹಾಜರಿದ್ದರು.