ಹಸಿರು ಪಟಾಕಿ ಹೊರತು ಬೇರೆ ಪಟಾಕಿ ಮಾರಾಟ, ಸಿಡಿಸಿದರೆ ದೂರು ದಾಖಲು
ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ. 13: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರಕಾರ ಹಸಿರು ಪಟಾಕಿ ಹೊರತಾಗಿ ಬೇರೆ ಯಾವುದೇ ಪಟಾಕಿಯನ್ನು ಮಾರಾಟ ಮಾಡುವುದು ಹಾಗೂ ಸಿಡಿಸುವುದನ್ನು ನಿಷೇಧಿಸಿದೆ. ಪಟಾಕಿಗಳನ್ನು ಹಚ್ಚುವ, ಸಿಡಿಸುವ ಸಮಯ ರಾತ್ರಿ 8ರಿಂದ ಗಂಟೆಯಿಂದ ರಾತ್ರಿ 10ಗಂಟೆಯ ವರೆಗೆ ನಿಗದಿಪಡಿಸಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಹಸಿರು ಪಟಾಕಿಗಳಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ರಾಸಾಯನಿಕಗಳಾದ ಆಲ್ಯೂಮಿನಿಯಂ, ಬೇರಿಯಂ, ಪೊಟಾಷಿಯಂ ನೈಟ್ರೇಟ್ ಮತ್ತು ಕಾರ್ಬನ್ ರಹಿತ ಅಥವಾ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿದ್ದು, ಬೇರೆ ಪಟಾಕಿಗಳಿಗೆ ಹೋಲಿಸಿದಾಗ ಸುಮಾರು ಶೇ.30ರಷ್ಟು ಕಡಿಮೆ ಕಣಗಳನ್ನು ಹೊರಹಾಕುತ್ತವೆ ಹಾಗೂ ಶಬ್ಧಮಟ್ಟವೂ 125 ಡೆಸಿಬಲ್ಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ.
ಹಸಿರು ಪಟಾಕಿಗಳ ತಯಾರಕರು ತಮ್ಮ ಪಟಾಕಿಗಳ ಕಾರ್ಟೂನ್ ಬಾಕ್ಸ್ ಗಳ ಮೇಲೆ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ನಾಗಪುರರವರಿಂದ ಅನುಮೋದನೆ ಪಡೆದು ನೋಂದಣಿ, ಪ್ರಮಾಣ ಪತ್ರ ಹಾಗೂ ಲಾಂಛನ ಒಳಗೊಂಡ ಕ್ವಿಕ್ ರೆಸ್ಪಾನ್ಸ್ ಕೋಡ್ ಅನ್ನು ಪ್ರದರ್ಶಿಸಿರುತ್ತಾರೆ. ಹಸಿರು ಪಟಾಕಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್ಸೈಟ್ www.kspcb.gov.in ನಲ್ಲಿ ಪಡೆಯುವುದು. ಸಾರ್ವಜನಿಕರಿಗೆ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡುಬಂದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಕಚೇರಿಗೆ ದೂರನ್ನು ನೀಡುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ.