ಹಸಿರು ಪಟಾಕಿಯಲ್ಲಿಯೂ ಇದೆ ರಾಸಾಯನಿಕ ಮಿಶ್ರಣ; ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಲಹೆ

ಬೆಂಗಳೂರು, ನ.13: ರಾಸಾಯನಿಕ ಮಿಶ್ರಿತ ಪಟಾಕಿಗಳಂತೆಯೇ ಹಸಿರು ಪಟಾಕಿಯಲ್ಲಿಯೂ ಒಂದಿಷ್ಟು ಪ್ರಮಾಣ ರಾಸಾಯನಿಕ ಬಳಕೆ ಮಾಡಿರುವುದರಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿವೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ ಎಂದು ಮಿಂಟೋ ಪ್ರಾದೇಶಿಕ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಶುಕ್ರವಾರ ಮಿಂಟೋ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರು ಪಟಾಕಿ ತಯಾರಿಕೆಯಲ್ಲಿಯೂ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಆದರೆ, ಬಳಕೆ ಪ್ರಮಾಣ ಕಡಿಮೆ ಇರುತ್ತದೆ. ಪ್ರಮುಖವಾಗಿ ಬೇರಿಯಂ, ಲೀಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳು ಬಳಸುತ್ತಾರೆ. ಹೀಗಾಗಿ, ಹಸಿರು ಪಟಾಕಿಯಿಂದ ಹಾನಿಯಾಗುವುದಿಲ್ಲ ಎಂಬ ತಪ್ಪುಕಲ್ಪನೆ ಬೇಡ. ಕಡ್ಡಾಯವಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ದೀಪಾವಳಿ ಹಬ್ಬ ಬಂದ ತಕ್ಷಣ ಪಟಾಕಿ ಸಿಡಿತದಿಂದ ಗಾಯಗೊಂಡವರು 50 ಕ್ಕೂ ಅಧಿಕ ಜನರು ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಅವರಿಗೆ ಸೇವೆ ಒದಗಿಸಲು ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿ ಆಸ್ಪತ್ರೆಯಲ್ಲಿ ಒಂದು ಪಾಳಿಗೆ 18 ರಿಂದ 20 ಮಂದಿ ವೈದ್ಯ ಹಾಗೂ ವೈದ್ಯೇತರ ಸಿಬ್ಬಂದಿ ಕೆಲಸ ಮಾಡುತ್ತಾರೆ. ಚಿಕಿತ್ಸೆಗೆ ಬೇಕಾದ ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯೂ ಮಾಡಿಕೊಂಡಿದ್ದು, ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಗಾಯಾಳುಗಳಲ್ಲಿ ಶೇ. 40ರಷ್ಟು 14 ವರ್ಷದೊಳಗಿನ ಮಕ್ಕಳಿರುತ್ತಾರೆ. ಇವರಲ್ಲಿ ಗಂಡು ಮಕ್ಕಳು ಹೆಚ್ಚಿನವರು. ಹೀಗಾಗಿ ಮಕ್ಕಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಪಟಾಕಿಯಿಂದ ಕಣ್ಣಿಗೆ ಘಾಸಿಯಾದಾಗ ಮನೆ ಮದ್ದು ಮಾಡದೆ, ಶುದ್ಧ ಬಟ್ಟೆಯಲ್ಲಿ ಕಣ್ಣು ಮುಚ್ಚಿ ತಕ್ಷಣ ಆಸ್ಪತ್ರೆಗೆ ತೆರಳಬೇಕು. ನಗರ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದಲ್ಲಿ ಸಹಾಯವಾಣಿ 080-26707176 ಹಾಗೂ ಮೊ. 9481740137 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ 48 ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಮಿಂಟೋಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವರಲ್ಲಿ ಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡರು. ಪಟಾಕಿ ಸಿಡಿಸುವ ವೇಳೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸದ ಕಾರಣ ರಸ್ತೆಯಲ್ಲಿ ಹೋಗುವ ಅಮಾಯಕರ ಕಣ್ಣಿಗೆ ಹಾನಿಯಾಗಿರುವ ಬಹಳಷ್ಟು ಪ್ರಕರಣಗಳು ಇವೆ. ಹೀಗಾಗಿ ಪಟಾಕಿ ಸಿಡಿಸುವ ವೇಳೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದರು.