ಪಾಕ್ ಜೈಲಿನಲ್ಲಿ 20 ವರ್ಷ ಕಳೆದು ವಾಪಸ್ಸಾದ ಒಡಿಶಾ ಗ್ರಾಮಸ್ಥ
ರೂರ್ಕೆಲಾ: ಪಾಕಿಸ್ತಾನದ ಕಾರಾಗೃಹದಲ್ಲಿ 20 ವರ್ಷಗಳ ಜೈಲುವಾಸ ಅನುಭವಿಸಿ ತಾಯ್ನಾಡಿಗೆ ಮರಳಿದ ಬುಡಕಟ್ಟು ಜನಾಂಗದ ಬ್ರಿಜು ಕುಲು (50) ಅವರಿಗೆ ಹುಟ್ಟೂರಿನಲ್ಲಿ ಶುಕ್ರವಾರ ಭರ್ಜರಿ ಸ್ವಾಗತ ದೊರಕಿತು.
25ನೇ ವರ್ಷದಲ್ಲಿ ಮನೆ ಬಿಟ್ಟಿದ್ದ ಕುಲು, ಪಂಜಾಬ್ಗೆ ತೆರಳುವ ಮುನ್ನ ಹಲವು ಕಡೆಗಳಲ್ಲಿ ಕೆಲಸ ಮಾಡಿದ್ದರು. ಪಂಜಾಬ್ನಲ್ಲಿದ್ದಾಗ ತಪ್ಪಿ ಪಾಕಿಸ್ತಾನ ಗಡಿಯೊಳಕ್ಕೆ ತೆರಳಿದ್ದರು.
ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸುಂದರಗಢ ಜಿಲ್ಲೆಯ ಕುತ್ರಾ ಬ್ಲಾಕ್ನ ಕಟಂಗಾ ಗ್ರಾಮಕ್ಕೆ ಕುಲು ಅವರನ್ನು ಹಿರಿಯ ಸರ್ಕಾರಿ ಅಧಿಕಾರಿಗಳು ಕರೆ ತಂದರು. ಲಾಹೋರ್ ಜೈಲಿನಿಂದ ಬಿಡುಗಡೆಯಾಗಿ ಹುಟ್ಟೂರಿಗೆ ಮರಳಿದ ಅವರನ್ನು ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿದರು.
ಸಾಂಪ್ರದಾಯಿಕ ಬುಡಕಟ್ಟು ನೃತ್ಯ, ಸಂಗೀತ ಹಾಗೂ ಸಂಗೀತ ವಾದ್ಯಗಳನ್ನು ಬಾರಿಸುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಗ್ರಾಮದ ಜನ ಕುಲು ಆಗಮನವನ್ನು ಸಂಭ್ರಮಿಸಿದರು. ಸಮಾರಂಭಕ್ಕೆ ಕುಲು ಆಗಮಿಸುವುದನ್ನು ಮಾರ್ಗದ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ಕುತೂಹಲದಿಂದ ವೀಕ್ಷಿಸಿದರು.
ಕುಲು ಅವರ ಪೋಷಕರು ಈಗ ಇಲ್ಲ. ಆದರೆ ಸೋದರಮಾವ, ಅತ್ತೆ, ಸಹೋದರಿ ಮತ್ತು ಆಕೆಯ ಕುಟುಂಬದವರು ಕುಲು ಆಗಮನವನ್ನು ಕುತೂಹಲದಿಂದ ಕಾಯುತ್ತಿದ್ದರು.
"ಹುಟ್ಟೂರಿಗೆ ಮರಳಿದ್ದು ಅತೀವ ಸಂತಸ ತಂದಿದೆ. ಜೀವನದ ಉಳಿದ ಭಾಗವನ್ನು ಇಲ್ಲೇ ಕಳೆಯಲು ಬಯಸುತ್ತೇನೆ. ನಾನು ಬಿಟ್ಟುಹೋದ ಸ್ನೇಹಿತರು ಮತ್ತು ಇತರರನ್ನು ಗುರುತಿಸುವ ಪ್ರಯತ್ನ ಮಾಡುತ್ತೇನೆ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ" ಎಂದು ಕುಲು ಹೇಳಿದರು.
ಪಂಜಾಬ್ನಲ್ಲಿದ್ದಾಗ ತಮ್ಮ ಮನೆಯಿಂದ ಹೊರಟಿದ್ದ ಕುಲು ಅಕಸ್ಮಿಕವಾಗಿ ಪಾಕಿಸ್ತಾನ ಗಡಿ ದಾಟಿದ್ದರು. ಈತ ಭಾರತೀಯ ಗೂಢಚರ ಎಂಬ ಅನುಮಾನದಿಂದ ಪಾಕಿಸ್ತಾನ ಸೈನಿಕರು ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಜೈಲಿನಲ್ಲಿ 20 ಮಂದಿಯ ಜತೆಗೆ ನನ್ನನ್ನು ಕೂಡಿ ಹಾಕಲಾಗಿತ್ತು. ಆದರೆ ನಾನು ಊರಿಗೆ ಮರಳಲು ಬಯಸಿದ್ದೆ. ಅಂತಿಮವಾಗಿ ನನ್ನ ಪ್ರಾರ್ಥನೆ ಫಲಿಸಿತು. ನಾನು ವಾಪಾಸು ಬರುವಂತಾಯಿತು ಎಂದು ಹೇಳಿದರು.
ಕಳೆದ ತಿಂಗಳು ಪಾಕಿಸ್ತಾನ ಜೈಲು ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಕುಲು ಅವರನ್ನು ಹಸ್ತಾಂತರಿಸಿದ್ದರು. ಬಳಿಕ ಅಮೃತಸರ ಆಸ್ಪತ್ರೆಯಲ್ಲಿ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.