ಭಾರತ ಸೇವಾದಳ ವತಿಯಿಂದ ನೆಹರೂ ಜನ್ಮದಿನಾಚರಣೆ

ಮಂಗಳೂರು : ಭಾರತ ಸೇವಾದಳ ವತಿಯಿಂದ ಇಂದು ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆಗೆ ಹೂ ಹಾರ ಮತ್ತು ಪುಷ್ಪಾರ್ಚನೆಗೈಯುವ ಮೂಲಕ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಬಶೀರ್ ಬೈಕಂಪಾಡಿ ಯವರು ಮಾತನಾಡುತ್ತ, ಈ ದೇಶದ ಪ್ರಥಮ ಪ್ರಧಾನಿ ನೆಹರೂ ರವರು ದೇಶದ ಆರ್ಥಿಕ, ಸಾಮಾಜಿಕ, ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಎಂದರು.
ಪಂಚವಾರ್ಷಿಕ ಯೋಜನೆಯನ್ನು ರೂಪಿಸಿ, ಅನೇಕ ಕೈಗಾರಿಕೋದ್ಯಮಗಳನ್ನು ದೇಶಾದ್ಯಂತ ಸ್ಥಾಪಿಸಿ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸಿದರು. ನೆಹರೂ ಅವರಿಗೆ ಮಕ್ಕಳೊಂದಿಗೆ ವಿಶೇಷವಾದ ಪ್ರೀತಿ, ಮಮತೆಯಿತ್ತು. ಆದ್ದರಿಂದಲೇ ನೆಹರೂ ಜನ್ಮದಿನಾಚರಣೆಯಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾದಳ ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಸುರೇಶ ಶೆಟ್ಟಿ, ಉದಯ್ ಕುಂದರ್, ಕ್ರತಿನ್ ಕುಮಾರ್, ಶೋಭಾ ಕೇಶವ, ಶಾಲಾ ಶಿಕ್ಷಕಿಯರಾದ ಪಾವನ, ಅರುಣಾ, ಸುಮಾ, ಸೇವಾದಳದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಸೇವಾದಳ ಕಾರ್ಯದರ್ಶಿ ಟಿ. ಕೆ. ಸುಧೀರ್ ಸ್ವಾಗತಿಸಿ, ಸಂಘಟಕ ಮಂಜೇಗೌಡ ಕಾರ್ಯಕ್ರಮ ನಿರೂಪಿಸಿದರು.








