ಕೆಥೋಲಿಕ್ ಸಭಾದಿಂದ ದೀಪಾವಳಿ ಶುಭಾಶಯ ವಿನಿಮಯ

ಉಡುಪಿ, ನ.14: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಲ್ಯಾಣಪುರ ವಲಯ ಸಮಿತಿಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯದಲ್ಲಿ ಇಂದು ಹಬ್ಬದ ಶುಭಾಶಯ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೆಥೊಲಿಕ್ ಸಭಾ ಕಲ್ಯಾಣಪುರ ಅಧ್ಯಕ್ಷೆ ರೋಜಿ ಬಾರೆಟ್ಟೊ ಮಾತನಾಡಿ, ದೀಪಾವಳಿಯನ್ನು ಅಶಕ್ತರು ಮತ್ತು ಅನಾಥರೊಂದಿಗೆ ಆಚರಣೆ ಮಾಡ ಬೇಕು ಎಂಬ ಉದ್ದೇಶದಿಂದ ಈ ಅನಾಥಾಲಯವನ್ನು ಆಯ್ಕೆ ಮಾಡಿಕೊಂಡಿದ್ದು ದೀಪಾವಳಿಯ ಸಂದರ್ಭದಲ್ಲಿ ಅನಾಥ ಹಿರಿಯ ಜೀವಗಳ ಮುಖದಲ್ಲಿ ಬೆಳಕು ಮೂಡಲಿ ಎಂದು ಶುಭ ಹಾರೈಸಿದರು.
ಅಪ್ಪ ಅಮ್ಮ ಅನಾಥಾಲಯದ ಮುಖ್ಯಸ್ಥ ಪ್ರಶಾಂತ್ ಕೂರಾಡಿ, ಮಾತನಾಡಿ, ಅನಾಥಾಲಯದಲ್ಲಿ 40ಕ್ಕೂ ಅಧಿಕ ಅನಾಥ ಹಿರಿಯ ನಾಗರಿಕರು ಈವರೆಗೆ ಸೇರ್ಪಡೆಯಾಗಿದ್ದು ಈಗಾಗಲೇ ಅವರನ್ನು ಗುಣಮುಖರನ್ನಾಗಿಸಿ ಕೆಲವರನ್ನು ಅವರ ಸ್ವಂತ ಮನೆಗೆ ತಲುಪಿಸುವ ಕಾರ್ಯ ಮಾಡಲಾ ಗಿದೆ. ಪ್ರಸ್ತುತ 24 ಮಂದಿ ಹಿರಿಯ ನಾಗರಿಕರು ವಿವಿಧ ಜಾತಿ ಧರ್ಮಗಳಿಗೆ ಸೇರಿದವರಿದ್ದು ಎಲ್ಲರಿಗೂ ಉತ್ತಮ ವ್ಯವಸ್ಥೆಯನ್ನು ದಾನಿಗಳ ನೆರವಿನೊಂದಿಗೆ ಉಚಿತವಾಗಿ ಮಾಡಲಾಗುತ್ತಿದೆ ಎಂದರು.
ವಲಯದ ವತಿಯಿಂದ ಅನಾಥಾಲಯಕ್ಕೆ ಅಕ್ಕಿ ಸಹಿತ ವಿವಿಧ ದಿನಬಳಕೆಯ ವಸ್ತುಗಳನ್ನು ದಾನವಾಗಿ ನೀಡಲಾಯಿತು. ಅಲ್ಲದೆ ದೀಪಾವಳಿಯ ಸಿಹಿಯನ್ನು ಕೂಡ ವಿತರಿಸಲಾಯಿತು. ಕೆಥೊಲಿಕ್ ಸಭಾದ ಮಾಜಿ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕಾರ್ಯದರ್ಶಿ ಸೆಲಿನ್ ಕುಲಾಸೊ, ಕೋಶಾಧಿಕಾರಿ ಉರ್ಬಾನ್ ಲೂವಿಸ್, ಪದಾಧಿಕಾರಿಗಳಾದ ಎಡ್ವರ್ಡ್ ಲಾರ್ಸನ್ ಡಿಸೋಜ, ಸುಜಾ ಡಿಸೋಜ, ಫೆಲಿಕ್ಸ್ ಪಿಂಟೊ, ಅರುಣ್ ಕೆಮ್ಮಣ್ಣು, ಸ್ಟೀವನ್ ಪ್ರಕಾಶ್ ಲೂವಿಸ್ ಉಪಸ್ಥಿತರಿದ್ದರು.







