ಪರ್ಕಳದಲ್ಲಿ ಬಿದಿರಿನಿಂದ ತಯಾರಿಸಿದ ಹಸಿರು ಪಟಾಕಿ !
ಉಡುಪಿ, ನ.14: ಪರ್ಕಳ ಫ್ರೆಂಡ್ಸ್‌ನವರು ಬಿದಿರಿನಿಂದ ತಯಾರಿಸಿದ ದೇಶಿ ಹಾಗೂ ಪರಿಸರ ಸ್ನೇಹಿ ಪಟಾಕಿಯನ್ನು ಶನಿವಾರ ಮಣಿಪಾಲ ಪರ್ಕಳದ ಸ್ವಾಗತ್ ಹೋಟೆಲ್ ನ ಬಳಿ ಪ್ರದರ್ಶಿಸಲಾಯಿತು.
ಈ ಬಾರಿ ಹಸಿರು ಪಟಾಕಿಯ ಮಾದರಿಯನ್ನು ಸಾಮಾಜಿಕ ಕಾರ್ಯಕರ್ತ ರಾದ ಗಣೇಶ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಜೊತೆ ಯಾಗಿ ವಿನ್ಯಾಸಗೊಳಿಸಿದ್ದಾರೆ. ಬಿದಿರನ್ನು ಅಡ್ಡ ಮಲಗಿಸಿ ರಂಧ್ರಕ್ಕೆ ಸ್ವಲ್ಪ ಸೀಮೆ ಎಣ್ಣೆ ಸುರಿದು, ಸೈಕಲ್ ಪಂಪ್ನಲ್ಲಿ ಅದೇ ರಂಧ್ರಕ್ಕೆ ಗಾಳಿ ಹಾಕಬೇಕು. ಅದೇ ರಂಧ್ರದ ಮೇಲೆ ಬೆಂಕಿ ಇಟ್ಟರೆ ಪಟಾಕಿ ಸಿಡಿದ ಶಬ್ದ ಬರುತ್ತದೆ. ಇದರಿಂದ ಯಾವುದೇ ಹೊಗೆಯಿಲ್ಲ, ರಾಶಿ ಕಸ ಇಲ್ಲ. ಹಣ ಕೂಡ ಖರ್ಚು ಆಗುವುದಿಲ್ಲ ಎಂದು ಗಣೇಶ್‌ರಾಜ್ ಸರಳಬೆಟ್ಟು ತಿಳಿಸಿದರು.
ಸೀಮೆಯೆಣ್ಣೆಯಿರುವ ಮುಚ್ಚಿದ ಬಿದಿರಿನೊಳಗೆ ಭಾರೀ ಪ್ರಮಾಣದಲ್ಲಿ ಗಾಳಿ ತುಂಬಿಸಿದಾಗ ಬಿಸಿ ನಿರ್ಮಾಣವಾಗುತ್ತದೆ. ರಂಧ್ರದಿಂದ ಪೈಪ್ ತೆಗೆದು ಬೆಂಕಿ ಸೋಕಿಸಿದಾಗ ದೊಡ್ಡ ಶಬ್ದ ಸೃಷ್ಟಿಯಾಗುತ್ತದೆ. ಹಿಂದಿನ ಕಾಲದಲ್ಲಿ ಗದ್ದೆಗೆ ಬರುವ ಕಾಡು ಪ್ರಾಣಿಗಳನ್ನು ಓಡಿಸಲು ಈ ತಂತ್ರ ಗಾರಿಕೆಯನ್ನು ಬಳಸಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದರು.