ಹಡಿಲು ಬಿದ್ದ ಗದ್ದೆಯಲ್ಲಿ ಬೆಳೆದ ಸಾವಯವ ಕೆಂಪಕ್ಕಿ ಲೋಕಾರ್ಪಣೆ

ಉಡುಪಿ, ನ.14: ನಿಟ್ಟೂರು ಪ್ರೌಢಶಾಲಾ ಸುವರ್ಣ ಮಹೋತ್ಸವದ ಪ್ರಯುಕ್ತ 50 ಎಕರೆ ಹಡಿಲು ಬಿದ್ದ ಗದ್ದೆಯಲ್ಲಿ ಬೆಳೆದ ಸಾವಯವ ಕೆಂಪಕ್ಕಿ (ಕಜೆ)ಯನ್ನು ನಿಟ್ಟೂರು ಸ್ವರ್ಣ ಬ್ರಾಂಡ್ ಮೂಲಕ ಶುಕ್ರವಾರ ಶಾಲೆಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಶಾಲಾ ನಿವೃತ್ತ ಮುಖ್ಯಶಿಕ್ಷಕ ಮುರಲಿ ಕಡೆಕಾರ್ ಮಾತನಾಡಿ, ಈ ಕೃಷಿ ಕಾರ್ಯಕ್ಕೆ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ 13ಲಕ್ಷ ರೂ. ಸಂಗ್ರಹಿಸ ಲಾಗಿತ್ತು. ಪುತ್ತೂರು, ಪೆರಂಪಳ್ಳಿ, ಕಕ್ಕುಂಜೆ, ನಿಟ್ಟೂರು ಮತ್ತು ಕರಂಬಳ್ಳಿ ಗ್ರಾಮಗಳಲ್ಲಿ 20-30 ವರ್ಷಗಳಿಂದ ಹಡಿಲು ಬಿದ್ದ ಗದ್ದೆ ಗಳಲ್ಲಿ ಸಾವಯವ ಮಾದರಿಯಲ್ಲಿ ಭತ್ತ ಕೃಷಿ ಮಾಡಲಾಗಿದೆ. 32 ಟನ್ ಭತ್ತ ಬೆಳೆದಿದ್ದು, 25 ಟನ್ ಅಕ್ಕಿ ತೆಗೆಯಲಾಗಿದೆ. ಇನ್ನು 5 ರಿಂದ 6 ಎಕರೆ ಕಟಾವಿಗೆ ಬಾಕಿ ಇದೆ ಎಂದರು.
ಕೆ.ಜಿ.ಗೆ 50 ರೂ.ಗಳಂತೆ ಅಕ್ಕಿಯನ್ನು 5, 10 ಮತ್ತು 25 ಕೆ.ಜಿ. ಚೀಲಗಳಲ್ಲಿ ಯಕ್ಷಗಾನ ಕಲಾರಂಗ ಹಾಗೂ ಅರ್ಪಿತಾ ಟ್ರೇಡರ್ಸ್ ಮೂಲಕ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಲಾಭದ ದೃಷ್ಟಿಕೋನವಿಲ್ಲ. ಖರ್ಚು ಕಳೆದು ಉಳಿದ ಮೊತ್ತವನ್ನು ಬೇಸಾಯಕ್ಕೆ ಗದ್ದೆಗಳನ್ನು ನೀಡಿದ ರೈತರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಪ್ರವಾಸದಲ್ಲಿರುವ ಶಾಸಕ ಕೆ.ರಘುಪತಿ ಭಟ್, ಆಡಿಯೋ ಸಂದೇಶ ಕಳುಹಿಸಿ, ಯಾವುದೇ ಕೆಮಿಕಲ್ ಉತ್ಪನ್ನ ಬಳಸದೆ ಹಡಿಲು ಬಿದ್ದ ಗದ್ದೆಯಲ್ಲಿ ಕೃಷಿ ಮಾಡಲಾಗಿದೆ. ಮುಂದಿನ ವರ್ಷದಿಂದ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಹಡಿಲು ಬಿದ್ದ ಗದ್ದೆಗಳಲ್ಲಿ ಸಂಘ-ಸಂಸ್ಥೆ ಸಹಿತ ಇತರ ಉತ್ಸಾಹಿಗಳ ತಂಡದೊಂದಿಗೆ ನಾಟಿ ಮಾಡಲು ಪ್ರುತ್ನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್, ಮುಖ್ಯ ಶಿಕ್ಷಕಿ ಅನುಸೂಯಾ, ಹಳೆ ವಿದ್ಯಾರ್ಥಿ ಸಂಘದ ಯೋಗೀಶ್ವರ ಚಂದ್ರಧರ್ ಉಪಸ್ಥಿತರಿದ್ದರು. ದಿನೇಶ್ ಹಾಗೂ ಭಾಸ್ಕರ ಡಿ.ಸುವರ್ಣ ಅನುಭವ ಹಂಚಿ ಕೊಂಡರು.







