ಅವರು ಏನೂ ಮಾಡಲ್ಲ, ಕೆಲಸ ಇದ್ದರೆ ನನ್ನ ಬಳಿ ಬನ್ನಿ: ಸುಮಲತಾ ವಿರುದ್ಧ ಪ್ರತಾಪ್ ಸಿಂಹ ಟೀಕೆ

ಮಂಡ್ಯ, ನ.14: ಸಂಸದೆ ಸುಮಲತಾ ಅಂಬರೀಷ್ ಬಗ್ಗೆ ಮೈಸೂರು ಮಡಿಕೇರಿ ಸಂಸದ ಪ್ರತಾಪ್ ಸಿಂಹ ಟೀಕೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೆಲವು ದಿನಗಳ ಹಿಂದೆ ತಾಲೂಕಿನ ಯಲಿಯೂರು ಗ್ರಾಮದ ಬಳಿ ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ಸಂಬಂಧ ಭೂಮಿ ಕಳೆದುಕೊಂಡ ರೈತರಿಂದ ಅಹವಾಲು ಸ್ವೀಕರಿಸುವ ವೇಳೆ ಪ್ರತಾಪ್ ಸಿಂಹ ಸುಮಲತಾ ಬಗ್ಗೆ ಮಾತನಾಡಿರುವ ವಿಡೀಯೋ ವೈರಲ್ ಆಗಿದೆ.
ಈ ಸಂದರ್ಭ ಅಧಿಕಾರಿಯೊಬ್ಬರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಆ ಯಮ್ಮಾ ಏನೂ ಕೆಲಸ ಮಾಡುವುದಿಲ್ಲ. ಏನಾದರೂ ಕೆಲಸವಿದ್ದರೆ ನನ್ನ ಬಳಿಗೆ ಬನ್ನಿ ಮಾಡಿಕೊಡುತ್ತೇನೆ ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, ಪ್ರತಾಪ್ ಸಿಂಹ ಅವರು ಸುಮಲತಾ ಅವರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಒಬ್ಬ ಭ್ರಷ್ಟ ಅಧಿಕಾರಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸುಮಲತಾ ಅವರ ಕೆಲಸದ ಬಗ್ಗೆ ಟೀಕೆ ಮಾಡುವ ಯೋಗ್ಯತೆ ಪ್ರತಾಪ್ ಸಿಂಹ ಅವರಿಗೆ ಇಲ್ಲವೆಂದು ಕಿಡಿಕಾರಿದ್ದಾರೆ.





