ಬೆಂಗಳೂರಿನಲ್ಲಿ ಸಡಗರ, ಸಂಭ್ರಮದ ದೀಪಾವಳಿ ಆಚರಣೆ

ಬೆಂಗಳೂರು, ನ.14: ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ದೀಪಾವಳಿ ಮೂರು ದಿನಗಳ ಹಬ್ಬವಾಗಿದ್ದು, ಮೊದಲ ದಿನ ಶನಿವಾರ ನರಕಚತುರ್ದಶಿಯ ಜತೆಗೆ ಅಮಾವಾಸ್ಯೆಯೂ ಬಂದಿದೆ. ಈ ಸಾರಿ ದೀಪಾವಳಿ ಅಮಾವಾಸ್ಯೆ ಎರಡು ದಿನ (ಶನಿವಾರ ಮತ್ತು ರವಿವಾರ) ಬಂದಿದ್ದು, ಅವರವರ ಅನುಕೂಲಕ್ಕೆ ತಕ್ಕಂತೆ ಆಚರಣೆ ಮಾಡುತ್ತಿದ್ದಾರೆ.
ಮುಂಜಾನೆಯೇ ಬಾಗಿಲಿಗೆ ನೀರು ಹಾಕಿ ಚೆಂದದ ರಂಗವಲ್ಲಿ ಬಿಡಿಸಿದ್ದರು. ಕೆಲವರು ಆ ರಂಗವಲ್ಲಿಯನ್ನು ಬಣ್ಣ ಮತ್ತು ಬಗೆ ಬಗೆಯ ಹೂವುಗಳಿಂದ ಅಲಂಕರಿಸಿದ್ದರು. ತೋರಣ ಕಟ್ಟಿ, ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಮಕ್ಕಳು ಗನ್ ಹಿಡಿದು ಹುರುಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನೋಮುವ ಸಂಪ್ರದಾಯವುಳ್ಳವರು ಕೆಲವರು ಶನಿವಾರ ಮಧ್ಯಾಹ್ನದ ನಂತರ ಕಜ್ಜಾಯ, ನೋಮುದಾರ, ಅಡಿಕೆ-ಎಲೆಯೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜಿಸಿದರು. ಮತ್ತೆ ಕೆಲವರು ರವಿವಾರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಗರದ ನಾನಾ ಬಡಾವಣೆಗಳ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿಗೆಂದು ಶನಿವಾರ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಹೂವು, ಹಣ್ಣು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು.
ದೀಪಗಳ ಅಲಂಕಾರ: ದೀಪಾವಳಿ ಎಂದರೆ ದೀಪಗಳ ಹಬ್ಬ. ಹೀಗಾಗಿ ಸಂಜೆಯಾಗುತ್ತಿದ್ದಂತೆಯೇ ಮನೆಯ ಒಳಗೂ, ಹೊರಗೂ ದೀಪಗಳು ಬೆಳಗಿದವು. ಕೆಲವರು ನಡುಮನೆ, ದೇವರ ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ದೀಪಗಳನ್ನಿಟ್ಟು ಅಲಂಕರಿಸಿದ್ದರು.
ಆಕಾಶ ಬುಟ್ಟಿಗಳಿಂದ ಅಲಂಕೃತಗೊಂಡ ಕಚೇರಿ, ಮಳಿಗೆಗಳು: ಹಲವು ಕಚೇರಿಗಳು, ಮಾರಾಟ ಮಳಿಗೆಗಳನ್ನು ಬಗೆ ಬಗೆಯ ವಿನ್ಯಾಸದ ನಾನಾ ಬಣ್ಣದ ಆಕಾಶಬುಟ್ಟಿಗಳಿಂದ ಅಲಂಕರಿಸಲಾಗಿತ್ತು. ಚಿನ್ನಾಭರಣ, ಬಟ್ಟೆ ಮಳಿಗೆಗಳು, ಮಾಲ್‍ಗಳಲ್ಲಿ ಒಂದು ವಾರ ಮೊದಲೇ ಅಲಂಕರಿಸಲಾಗಿತ್ತು. ಹೀಗಾಗಿ ಎಲ್ಲೆಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.
.jpg)







