ಡಿಜೆ ಹಳ್ಳಿ ಗಲಭೆ ಪ್ರಕರಣ: ಅಖಂಡ ಶ್ರೀನಿವಾಸಮೂರ್ತಿಗೆ ನ್ಯಾಯ ದೊರಕಿಸಿಕೊಡಲು ಸಿಎಂಗೆ ಮನವಿ

ಬೆಂಗಳೂರು, ನ.14: ದೇವರ ಜೀವನಹಳ್ಳಿ, ಕಾಡುಗೊಂಡನಹಳ್ಳಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿ ಭೋವಿ ಸಮುದಾಯದ ಇಮ್ಮಡಿ ಸಿದ್ದರಾಮೇಶ್ವರಿ ಸ್ವಾಮೀಜಿ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಶನಿವಾರ ಇಲ್ಲಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಖುದ್ದು ಭೇಟಿ ಮಾಡಿದ ಸ್ವಾಮೀಜಿ, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ನಡೆದು ಮೂರು ತಿಂಗಳು ಕಳೆದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಜೀವ ದಹನ ಮಾಡಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಹೀಗಾಗಿ ಕೂಡಲೇ ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಂಪತ್ ರಾಜ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಡಿಜೆ ಹಳ್ಳಿ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಸಂಪತ್ ರಾಜ್ ಅವರನ್ನು ಕೂಡಲೇ ಬಂಧಿಸುವುದಲ್ಲದೆ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ನ್ಯಾಯ ದೊರಕಿಸಿಕೊಡಲು ಸರಕಾರ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದ್ದಾರೆಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಸರಕಾರ ಪ್ರಕರಣ ಸಂಬಂಧ ಆರಂಭದಲ್ಲಿ ಅತ್ಯಂತ ಉತ್ಸಾಹದಲ್ಲಿ ತನಿಖೆ ಕೈಗೊಂಡಿತ್ತು. ಇದೀಗ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಸರಿಯಲ್ಲ. ಶೋಷಿತ ಸಮುದಾಯದಿಂದ ಬಂದಿರುವ ಶಾಸಕರೊಬ್ಬರಿಗೆ ಸರಕಾರ ಸೂಕ್ತ ರೀತಿಯಲ್ಲಿ ರಕ್ಷಣೆ ಕಲ್ಪಿಸದಿದ್ದರೆ ಹೇಗೆ? ಎಂದು ಪ್ರಶ್ನಿಸಿರುವ ಶ್ರೀಗಳು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.







