ಅಮೆರಿಕ ಚುನಾವಣೆ: ಬೈಡನ್‌ಗೆ 306 ಇಲೆಕ್ಟೋರಲ್ ಮತ ಟ್ರಂಪ್‌ಗೆ 232

ವಾಶಿಂಗ್ಟನ್, ನ. 14: ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ನಿಯೋಜಿತ ಅಧ್ಯಕ್ಷ ಜೋ ಬೈಡನ್ 306 ಇಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದಿದ್ದಾರೆ. ಅವರ ರಿಪಬ್ಲಿಕನ್ ಪಕ್ಷದ ಎದುರಾಳಿ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 232 ಇಲೆಕ್ಟೋರಲ್ ಮತಗಳನ್ನು ಪಡೆದಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ಶುಕ್ರವಾರ ಬಿಂಬಿಸಿವೆ.
ಅಮೆರಿಕದ ಅಧ್ಯಕ್ಷರನ್ನು ಇಲೆಕ್ಟೋರಲ್ ಕಾಲೇಜ್ ಆರಿಸುತ್ತದೆ. ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಲು 270 ಇಲೆಕ್ಟೋರಲ್ ಮತಗಳ ಸರಳ ಬಹುಮತ ಬೇಕಾಗಿದ್ದು, ಬೈಡನ್ ಅದನ್ನು ದಾಟಿ ತುಂಬಾ ಮುಂದಿದ್ದಾರೆ.
ರಿಪಬ್ಲಿಕನ್ ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ಜಾರ್ಜಿಯ ರಾಜ್ಯವನ್ನು ಗೆಲ್ಲುವ ಮೂಲಕ ಬೈಡನ್ ತನ್ನ ಮುನ್ನಡೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.
2016ರಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಸ್ಪರ್ಧಿಸಿದ್ದ ವೇಳೆ, ಟ್ರಂಪ್ ಕೂಡ 306 ಇಲೆಕ್ಟೋರಲ್ ಮತಗಳನ್ನು ಗಳಿಸಿದ್ದರು. ಆದರೆ, ಈ ಬಾರಿ ಅವರು 232 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಜಾರ್ಜಿಯ ಸೇರಿದಂತೆ ಕಳೆದ ಬಾರಿ ಟ್ರಂಪ್‌ರನ್ನು ಗೆಲ್ಲಿಸಿದ್ದ ಐದು ರಾಜ್ಯಗಳನ್ನು ಈ ಬಾರಿ ಬೈಡನ್ ಗೆದ್ದಿದ್ದಾರೆ.







