ಕೇಂದ್ರದಿಂದ ನೆರೆ ಪರಿಹಾರ ಪಡೆಯುವಲ್ಲಿ ರಾಜ್ಯ ಸರಕಾರ ವಿಫಲ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ
ಬೆಂಗಳೂರು, ನ.14: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಕೇಂದ್ರ ಸರಕಾರದಿಂದ ನೆರೆ ಪರಿಹಾರ ಪಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಆರೋಪಿಸಿದ್ದಾರೆ.
ಉತ್ತರ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳ ಕರವೇ ಜಿಲ್ಲಾಧ್ಯಕ್ಷರ ಜತೆ ಸಭೆ ನಡೆಸಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು 25 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆಯೆಂದು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಆದರೆ, ವಾಸ್ತವವಾಗಿ ಅದಕ್ಕಿಂತ ದುಪ್ಪಟ್ಟು ನಷ್ಟವಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರದ ಹೇಳಿಕೆಯ ಪ್ರಕಾರವಾಗಿ ಇದುವರೆಗೆ ಕೇವಲ 4.5ಕೋಟಿ ರೂ.ನಷ್ಟು ಪರಿಹಾರ ವಿತರಿಸಲಾಗಿದೆ. ಆದರೆ, ರಾಜ್ಯದಲ್ಲಿ ಆಗಿರುವ ನಷ್ಟಕ್ಕೂ ವಿತರಿಸಲಾಗಿರುವ ಪರಿಹಾರಕ್ಕೂ ತುಂಬಾ ವ್ಯತ್ಯಾಸವಿದೆ. ಕೊಟ್ಟಿರುವ ಪರಿಹಾರದಲ್ಲೂ ರಾಜಕಾರಣಿಗಳು, ಪುಢಾರಿಗಳು ತಾರತಮ್ಯ ಎಸಗಿರುವುದನ್ನು ಗಮನಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಅಧಿಕಾರವಿದ್ದರೆ ರಾಜ್ಯ ಉದ್ಧಾರವಾಗುತ್ತದೆಯೆಂದು ಚುನಾವಣೆಗಳಲ್ಲಿ ನಂಬಿಸಲಾಗಿತ್ತು. ಆದರೆ, ಬಿಜೆಪಿ ಆಡಳಿತದಿಂದಾಗಿ ಭ್ರಮನಿರಸನಗೊಂಡಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಬೇಕಿದ್ದ ವಿರೋಧ ಪಕ್ಷದಗಳು ಮೌನಕ್ಕೆ ಶರಣಾಗಿವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರಗಳು ತಮ್ಮ ಜವಾಬ್ದಾರಿಗಳನ್ನು ಮರೆತಿರುವಾಗ ಕರ್ನಾಟಕ ರಕ್ಷಣಾ ವೇದಿಕೆ ನಿರ್ಣಾಯಕ ಹೋರಾಟವನ್ನು ಸಂಘಟಿಸಬೇಕಿದೆ. ಆ ಮೂಲಕ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಪ್ರಶ್ನಿಸಬೇಕಿದೆ ಎಂದು ಕರವೇ ಸಂಘಟನೆಯ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದರು.
ಈ ವೇಳೆ ಗದಗ ಜಿಲ್ಲಾ ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ಕಲಬುರಗಿ ಜಿಲ್ಲಾಧ್ಯಕ್ಷ ಮಹೇಶ್ ಕಾಶಿ, ಬೀದರ್ ಜಿಲ್ಲಾಧ್ಯಕ್ಷ ಸೋಮುನಾಥ ಮುಧೋಳ್, ಬಿಜಾಪುರ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ಯಾದಗಿರಿ ಜಿಲ್ಲಾ ಕರವೇ ಅಧ್ಯಕ್ಷ ಭೀಮೂ ನಾಯಕ್ ಮತ್ತಿತರರು ಭಾಗವಹಿಸಿದ್ದರು..







