ಟ್ರಂಪ್ ಮೊಕದ್ದಮೆಗಳು ಫಲಿತಾಂಶ ಬದಲಿಸಲಾರವು: ಚುನಾವಣಾ ಪರಿಣತರ ಅಭಿಪ್ರಾಯ

ವಾಶಿಂಗ್ಟನ್, ನ. 14: ನಿಯೋಜಿತ ಅಧ್ಯಕ್ಷ ಜೋ ಬೈಡನ್‌ಗೆ ವಿಜಯವನ್ನು ನಿರಾಕರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿರುವ ನ್ಯಾಯಾಲಯ ಮೊಕದ್ದಮೆಗಳು ಚುನಾವಣಾ ಫಲಿತಾಂಶವನ್ನು ಬದಲಿಸುವ ಸಾಧ್ಯತೆಗಳಿಲ್ಲ ಎಂದು ಚುನಾವಣಾ ಕಾನೂನು ಪರಿಣತರು ಅಭಿಪ್ರಾಯಪಡುತ್ತಾರೆ. ಅಮೆರಿಕ ಅಧ್ಯಕ್ಷರ ಈ ಕಸರತ್ತುಗಳು ಕೇವಲ ರಾಜಕೀಯ ಮತ್ತು ನಿಧಿ ಸಂಗ್ರಹ ಉದ್ದೇಶವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷ ವಂಚನೆ ನಡೆಸಿದೆ ಎಂಬುದಾಗಿ ಟ್ರಂಪ್ ಆರೋಪಿಸಿದ್ದಾರೆ. ಆದರೆ, ತನ್ನ ಆರೋಪಗಳಿಗೆ ಪೂರಕವಾಗಿ ಅವರು ಯಾವುದೇ ಪುರಾವೆಯನ್ನು ಒದಗಿಸಿಲ್ಲ. ನವೆಂಬರ್ 3ರಂದು ನಡೆದ ಚುನಾವಣೆಯನ್ನು ನಾನು ಗೆದ್ದಿದ್ದೇನೆ ಎಂದು ಹೇಳಿರುವ ಅವರು, ಡೆಮಾಕ್ರಟಿಕರು ಅಧ್ಯಕ್ಷ ಪದವಿಯನ್ನು ನನ್ನಿಂದ ಕದಿಯಲು ಯತ್ನಿಸುತ್ತಿದ್ದಾರೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ.
ಆದರೆ, ನ್ಯಾಯಾಲಯಗಳಲ್ಲಿ ಹೂಡಲಾಗಿರುವ ಮೊಕದ್ದಮೆಗಳಲ್ಲಿ ಈ ಭಾವಾವೇಶದ ಭಾವೆನಗಳು ಕಾಣುತ್ತಿಲ್ಲ ಎಂದು ಲಾಸ್ ಏಂಜಲಿಸ್‌ನ ಲೊಯೋಲ ಲಾ ಸ್ಕೂಲ್‌ನಲ್ಲಿ ಪ್ರೊಫೆಸರ್ ಆಗಿರುವ ಜೆಸ್ಸಿಕಾ ಲೆವಿನ್‌ಸನ್ ಹೇಳುತ್ತಾರೆ.
‘‘ರಾಜಕೀಯ ರಂಗದಲ್ಲಿ, ಬೃಹತ್ ಮತ ವಂಚನೆಯ ಆರೋಪಗಳನ್ನು ನಾವು ಕೇಳುತ್ತಿದ್ದೇವೆ. ಆದರೆ, ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿರುವ ಮೊಕದ್ದಮೆಗಳನ್ನು ಗಮನಿಸಿದರೆ ಅದು ಸಂಪೂರ್ಣ ಭಿನ್ನವಾಗಿದೆ’’ ಎಂದು ಅವರು ಹೇಳಿದ್ದಾರೆ.
ಈ ವಾರ ಮಿಶಿಗನ್ ಮತ್ತು ಪೆನ್ಸಿಲ್ವೇನಿಯಗಳಲ್ಲಿ ಹೂಡಲಾಗಿರುವ ಹೆಚ್ಚಿನ ಮೊಕದ್ದಮೆಗಳಲ್ಲಿ, ಬೈಡನ್ ವಿಜಯಿ ಎಂಬುದಾಗಿ ಪ್ರಮಾಣಪತ್ರ ನೀಡುವುದರಿಂದಿ ಅಧಿಕಾರಿಗಳನ್ನು ತಡೆಯಬೇಕು ಎಂಬುದಾಗಿ ಮನವಿ ಮಾಡಲಾಗಿದೆ.







