ಸಿಡ್ನಿಯಲ್ಲಿ ಭಾರತದ ಕ್ರಿಕೆಟ್ ತಂಡದ ತರಬೇತಿ ಆರಂಭ

ಸಿಡ್ನಿ: ಆಸ್ಟ್ರೇಲಿಯದ ವಿರುದ್ಧ ಸುದೀರ್ಘ ಪ್ರವಾಸಕ್ಕೆ ಬಂದಿಳಿದಿರುವ ಭಾರತದ ಕ್ರಿಕೆಟ್ ತಂಡದ ಸದಸ್ಯರು ಶನಿವಾರ ಹೊರಾಂಗಣ ತರಬೇತಿಯನ್ನು ಪ್ರಾರಂಭಿಸಿದರು. ಇತ್ತೀಚೆಗೆ ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾರತದ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಮತ್ತು ಮುಹಮ್ಮದ್ ಸಿರಾಜ್ ಸೇರಿದಂತೆ ಹಲವು ಮಂದಿ ಕ್ರಿಕೆಟಿಗರು ಆಡಿದ್ದರು.
ಸಿಡ್ನಿ ಒಲಿಂಪಿಕ್ ಪಾರ್ಕ್ ಒಳಗೆ ಬ್ಲಾಕ್‌ಟೌನ್ ಇಂಟರ್‌ನ್ಯಾಶನಲ್ ಸ್ಪೋರ್ಟ್ಸ್‌ಪಾರ್ಕ್‌ನಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿದ್ದರು.
ಹೊರಾಂಗಣ ತರಬೇತಿ ಮತ್ತು ಜಿಮ್‌ನಲ್ಲಿ ಭಾಗವಹಿಸಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
ಸ್ಪಿನ್ನರ್ ಕುಲ್‌ದೀಪ್ ಯಾದವ್, ವೇಗದ ಬೌಲರ್‌ಗಳಾದ ಉಮೇಶ್ ಯಾದವ್, ಟಿ.ನಟರಾಜನ್ ಮತ್ತು ದೀಪಕ್ ಚಹರ್, ಆಲ್‌ರೌಂಡರ್ ರವೀಂದ್ರ ಜಡೇಜ, ಶಾರ್ದುಲ್ ಠಾಕೂರ್, ಚೇತೇಶ್ವರ ಪೂಜಾರ್ ಮತ್ತಿತರರು ಪಾಲ್ಗೊಂಡಿದ್ದರು.
ಇದೀಗ 14 ದಿನಗಳ ಕ್ವಾರಂಟೈನ್‌ನಲ್ಲಿರುವ ಭಾರತದ ಕ್ರಿಕೆಟ್ ತಂಡದ ಸದಸ್ಯರು ಆರಂಭಿಕ ಕೋವಿಡ್ -19 ಪರೀಕ್ಷೆಗೊಳಗಾಗಿದ್ದಾರೆ.
ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸಹ ಸ್ಪಿನ್ನರ್ ಕುಲದೀಪ್ ಅವರೊಂದಿಗೆ ಅಭ್ಯಾಸದಲ್ಲಿ ತೊಡಗಿರುವ ಚಿತ್ರವನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತವು ಪ್ರವಾಸದಲ್ಲಿ ಮೂರು ಏಕದಿನ, ಮೂರು ಟ್ವೆಂಟಿ-20 ಮತ್ತು 4 ಟೆಸ್ಟ್ ಸರಣಿಯನ್ನು ಆಡಲಿದ್ದು, ನವೆಂಬರ್ 27ರಿಂದ ಟ್ವೆಂಟಿ-20 ಸರಣಿ ಪ್ರಾರಂಭವಾಗಲಿದೆ.
ಟೆಸ್ಟ್ ಸರಣಿಯು ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಮತ್ತು ಬಳಿಕ ಅವರು ತವರಿಗೆ ವಾಪಸಾಗಲಿದ್ದಾರೆ.ಆಟಗಾರರು ಸುರಕ್ಷಿತ ಸ್ಥಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೊರಗಿನವರನ್ನು ಕ್ರೀಡಾಂಗಣದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ.







