ಸಂಪುಟ ವಿಸ್ತರಣೆ: ವರಿಷ್ಟರ ಭೇಟಿಗೆ ಸಮಯಾವಕಾಶದ ನಿರೀಕ್ಷೆಯಲ್ಲಿ ಸಿಎಂ ಬಿಎಸ್‍ವೈ

ಬೆಂಗಳೂರು, ನ. 15: ಸಚಿವ ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳ ಒತ್ತಡದ ಹಿನ್ನಲೆಯಲ್ಲಿ ವರಿಷ್ಟರೊಂದಿಗೆ ಸಮಾಲೋಚನೆ ನಡೆಸಲು ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೊಸದಿಲ್ಲಿಗೆ ತೆರಳಲಿದ್ದಾರೆ.
ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆ ಬೆನ್ನಲ್ಲೆ ದೀಪಾವಳಿಗೆ ಮೊದಲೇ ಸಂಪುಟ ವಿಸ್ತರಣೆಗೆ ಇಚ್ಛಿಸಿದ್ದ ಸಿಎಂ ಬಿಎಸ್‍ವೈ, ಪಕ್ಷದ ವರಿಷ್ಟರು ಬಿಹಾರ ರಾಜ್ಯದಲ್ಲಿ `ಸರಕಾರ ರಚನೆ ಕಸರತ್ತು' ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ದಿಲ್ಲಿ ಭೇಟಿ ವಿಳಂಬವಾಗುತ್ತಿದ್ದು, ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಉಪಚುನಾವಣೆ ನಂತರ ಸಂಪುಟ ವಿಸ್ತರಣೆಗೆ ಒತ್ತಡಗಳು ಹೆಚ್ಚಿದ್ದು, ಸಚಿವಾಕಾಂಕ್ಷಿ ಶಾಸಕರುಗಳು ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿ ಶೀಘ್ರ ಸಂಪುಟ ವಿಸ್ತರಿಸುವಂತೆ ಒತ್ತಡ ಹೇರಿದ್ದರು. ಬಿಜೆಪಿ ಸರಕಾರ ರಚನೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಶಾಸಕ ಮುನಿರತ್ನ, ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜು, ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕಾಗಿರುವುದರಿಂದ ಆದಷ್ಟು ಶೀಘ್ರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡುವ ನಿರೀಕ್ಷೆ ಇದೆ.
ನ.18 ಅಥವಾ ನ.19ಕ್ಕೆ ವರಿಷ್ಟರ ಭೇಟಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಕಾಶ ಸಿಕ್ಕರೆ ನ.20 ಅಥವಾ 21ಕ್ಕೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆಗಳಿವೆ. ಆದರೆ, ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬುದು ವರಿಷ್ಟರ ಭೇಟಿಯ ಬಳಿಕ ತೀರ್ಮಾನವಾಗಲಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆಗಳಿಗೆ ಎಂದು ಮೂಲಗಳು ತಿಳಿಸಿವೆ.







