ದಿನಗೂಲಿ, ಗುತ್ತಿಗೆ ನೌಕರರಿಗೆ ವೇತನ: ಪ್ರಧಾನ ಕಾರ್ಯದರ್ಶಿಗಳಿಗೆ ಅಧಿಕಾರ

ಬೆಂಗಳೂರು, ನ. 15: ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ನಿಗಮ, ಮಂಡಳಿಗಳಿಂದ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವೇತನ, ಸಹಾಯಾನುದಾನ ಸಂಸ್ಥೆಗಳ ವೇತನವನ್ನು ಪ್ರಸಕ್ತ ಸಾಲಿಗೆ ಒದಗಿಸಿರುವ ಅನುದಾನದಲ್ಲಿ ಬಿಡುಗಡೆ ಮಾಡಲು ಆಡಳಿತ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಅಧಿಕಾರ ನೀಡಿ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ.
ನೌಕರರ ವೇತಗಳಡಿ 2020-21ನೆ ಸಾಲಿಗೆ ಒದಗಿಸಿರುವ ಅನುದಾನದಲ್ಲಿ ಬಾಕಿ ಇರುವ ವೇತನ ಅನುದಾನವನ್ನು ಬಿಡುಗಡೆ ಮಾಡಲು ಸರಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಆರ್ಥಿಕ ಅಧಿಕಾರವನ್ನು ಹಣಕಾಸು ಇಲಾಖೆ ಆದೇಶ ಹೊರಡಿಸಿದೆ. ಒಂದು ವೇಳೆ ನವೆಂಬರ್ ತಿಂಗಳ ವೇತನವನ್ನು ಈಗಾಗಲೇ ಬಿಡುಗಡೆ ಮಾಡಿದ್ದರೆ ಡಿಸೆಂಬರ್ ನಿಂದ ಮಾರ್ಚ್‍ವರೆಗಿನ ನಾಲ್ಕು ತಿಂಗಳ ವೇತನ ಅನುದಾನವನ್ನು ಮಾತ್ರ ಬಿಡುಗಡೆ ಮಾಡಲು ಅವಕಾಶವಿದೆ ಎಂದು ಹಣಕಾಸು ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಖಜಾನೆ ಇಲಾಖೆಯ ಟಿಎನ್‍ಎಂಸಿ ಉದ್ದೇಶಿತ ಲೆಕ್ಕ ಶೀರ್ಷಿಕೆಗಳಡಿ ಪ್ರಸಕ್ತ ಸಾಲಿಗೆ ಒದಗಿಸಿರುವ ಅನುದಾನದಲ್ಲಿ ಬಿಡುಗಡೆ ಮಾಡಬೇಕಿರುವ ಅನುದಾನವನ್ನು ಬಿಡುಗಡೆ ಮಾಡಲು ಆಡಳಿತ ಇಲಾಖೆಗಳಿಗೆ ಕ್ರಮ ವಹಿಸಲು ಸೂಚಿಸಿದೆ. ಇತ್ತೀಚೆಗೆ ಹೊರಡಿಸಲಾಗಿದ್ದ ಆದೇಶದಲ್ಲಿ ನವೆಂಬರ್ 2020ರಿಂದ ಫೆಬ್ರವರಿ ವರೆಗಿನ ವೇತನದ ಬಾಪ್ತು, ಅನುದಾನಗಳನ್ನು ವೇತನದ ಲೆಕ್ಕ ಶೀರ್ಷಿಕೆಗಳಡಿ ಬಿಡುಗಡೆ ಮಾಡಲು ಸರಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಆರ್ಥಿಕ ಅಧಿಕಾರ ನೀಡಲಾಗಿತ್ತು ಎಂದು ತಿಳಿಸಲಾಗಿದೆ.







