ಆಹಾರದ ಹಕ್ಕು ಸಂರಕ್ಷಣೆಗಾಗಿ ಪೊಲೀಸ್ ಆಯುಕ್ತರಿಗೆ ಮನವಿ

ಮಂಗಳೂರು, ನ.15: ಜನತೆಯ ಆಹಾರದ ಹಕ್ಕಿನ ಸಂರಕ್ಷಣೆಗಾಗಿ ಮತ್ತು ಸುಸಜ್ಜಿತ ಜಾನುವಾರು ವಧಾಗ್ರಹದ ನಿರ್ಮಾಣಕ್ಕೆ ಒತ್ತಾಯಿಸಿ ‘ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿ’ಯ ನೇತೃತ್ವದ ನಿಯೋಗವೊಂದು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಅಕ್ರಮ ಗೋ ಸಾಗಾಟದ ನೆಪದಲ್ಲಿ ಅಧಿಕೃತ ದಾಖಲೆಗಳನ್ನು ಹೊಂದಿದ್ದರೂ ಕೂಡ ವಿನಾ ಕಾರಣ ಹಲ್ಲೆ ನಡೆಸುವುದು, ಹಣ ಮತ್ತು ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ದರೋಡೆ ಮಾಡುವ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲದೆ ಜಾನುವಾರು ಸಾಗಾಟದ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಇದರಿಂದಾಗಿ ಕಾನೂನುಬದ್ಧವಾಗಿ ವ್ಯಾಪಾರ ನಡೆಸುವವರಿಗೂ ಭಾರೀ ತೊಂದರೆ ಎದುರಾ ಗಿದೆ. ಈ ನಿಟ್ಟಿನಲ್ಲಿ ಕಾನೂನುಬದ್ಧ ವ್ಯಾಪಾರಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ಅಳವಡಿಸುವ ಮೂಲಕ ವ್ಯಾಪಾರಸ್ಥರಿಗೆ ಸಹಕಾರ ನೀಡಬೇಕು ಎಂದು ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಸುನೀಲ್ ಕುಮಾರ್ ಬಜಾಲ್, ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಕಾರ್ಪೊರೇಟರ್ ಅಬೂಬಕ್ಕರ್ ಕುದ್ರೋಳಿ, ಮಾನವ ಹಕ್ಕು ಹೋರಾಟಗಾರ ಕಬೀರ್ ಉಳ್ಳಾಲ, ಮಾಂಸ ವ್ಯಾಪಾರಸ್ಥರ ಸಂಘದ ಮುಖಂಡರಾದ ಆಲಿ ಹಸನ್, ಯಾಸಿನ್ ಕುದ್ರೋಳಿ, ಅಬ್ದುಲ್ ಖಾದರ್, ಮುಸ್ತಾಕ್ ಕದ್ರಿ ನಿಯೋಗದಲ್ಲಿದ್ದರು





