17 ವರ್ಷದ ಸಾದಾತ್ ರಹ್ಮಾನ್ ಗೆ ‘ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪುರಸ್ಕಾರ’
ಈ ಬಾಲಕನ ಸಾಧನೆಯ ಬಗ್ಗೆ ತಿಳಿದುಕೊಳ್ಳಿ

Photo: facebook.com/Md.SadatRahmanShakib
ಹೊಸದಿಲ್ಲಿ: ಸೈಬರ್ ನಿಂದನೆಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ 17 ವರ್ಷದ ಬಾಂಗ್ಲಾದೇಶದ ಬಾಲಕನೊಬ್ಬ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
15 ವರ್ಷದ ಬಾಲಕಿಯೊಬ್ಬಳು ಸೈಬರ್ ಕಿರುಕುಳದ ನಂತರ ಆತ್ಮಹತ್ಯೆಗೆ ಶರಣಾದ ಬಳಿಕ 17 ವರ್ಷದ ಸಾದಾತ್ ರಹ್ಮಾನ್ ಆನ್ ಲೈನ್ ನಿಂದನೆಗಳನ್ನು ರಿಪೋರ್ಟ್ ಮಾಡುವುದಕ್ಕಾಗಿ ಮೊಬೈಲ್ ಆ್ಯಪ್ ಒಂದನ್ನು ರಚಿಸಿದ್ದ.
ಇಷ್ಟೇ ಅಲ್ಲದೆ ಆನ್ ಲೈನ್ ಕಿರುಕುಳ, ದೌರ್ಜನ್ಯ, ನಿಂದನೆಗಳಿಂದಾಗುವ ಗಂಭೀರ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಸಾದಾತ್ ರಹ್ಮಾನ್ ಮಾಡಿದ್ದ.
“ಈಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳು ಆನ್ ಲೈನ್ ಅಪರಾಧ ಮತ್ತು ಸೈಬರ್ ನಿಂದನೆಗಳಿಗೆ ತುತ್ತಾಗುತ್ತಿದ್ದಾರೆ” ಎಂದು ಸಾದಾತ್ ರಹ್ಮಾನ್ ಹೇಳುತ್ತಾರೆ.
ಸದ್ಯದ ಕೊರೋನ ವೈರಸ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೆದರ್ ಲ್ಯಾಂಡ್ ಮೂಲದ ಕಿಡ್ಸ್ ರೈಟ್ ಫೌಂಡೇಶನ್ ಆನ್ ಲೈನ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ನೊಬೆಲ್ ಪುರಸ್ಕೃತೆ ಮಲಾಲಾ ಯೂಸುಫ್ ಝಾಯಿ ಕೂಡ ಸಾದಾತ್ ರನ್ನು ಪ್ರಶಂಸಿಸಿ ‘ಅವರೊಬ್ಬ ಸ್ಫೂರ್ತಿ’ ಎಂದಿದ್ದಾರೆ.
ಕಳೆದ ವರ್ಷ ಸ್ವೀಡಿಶ್ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್ ಬರ್ಗ್ ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.