ಉಪಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು 'ಮರಾಠಾ ಅಭಿವೃದ್ಧಿ ಪ್ರಾಧಿಕಾರ' ರಚನೆ: ಆರೋಪ
ಬೆಂಗಳೂರು, ನ. 15: ಬೀದರ್ ಜಿಲ್ಲೆಯ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು `ಮರಾಠಾ ಅಭಿವೃದ್ಧಿ ಪ್ರಾಧಿಕಾರ' ರಚನೆಗೆ ಮುಂದಾಗಿದ್ದಾರೆಂಬ ಆರೋಪ ಕೇಳಿಬಂದಿದೆ.
ಇದರ ಜೊತೆಗೆ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪದೇ ಪದೇ ಕನ್ನಡಿಗರ ವಿರುದ್ಧ `ಮರಾಠಾ' ಸಮುದಾಯದ ಭಾವನೆಗಳನ್ನು ಕೆರಳಿಸುವ ಮೂಲಕ ತಮ್ಮ ವೈಯಕ್ತಿಕ ಹಿತಕ್ಕಾಗಿ ಸಂಘರ್ಷ ಸೃಷ್ಟಿಸಲು ವಿಫಲಯತ್ನ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಬಗ್ಗುಬಡಿಯಲು ರಾಜ್ಯ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ, ರಾಜ್ಯ ಸರಕಾರ `ಮರಾಠಾ ಅಭಿವೃದ್ದಿ ಪ್ರಾಧಿಕಾರ' ರಚನೆಗೆ ಮುಂದಾಗಿರುವುದನ್ನು ಮರಾಠಾ ಸಮುದಾಯ ಸ್ವಾಗತಿಸಿದೆ. `ರಾಜ್ಯದಲ್ಲಿ ಮೂವತ್ತರಿಂದ ನಲವತ್ತು ಲಕ್ಷದಷ್ಟು ಮರಾಠಾ ಸಮುದಾಯದವರಿದ್ದು, ಈ ಜನಾಂಗದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲಾಗಿದೆ. ಮರಾಠಿ ಭಾಷೆಗೂ ಪ್ರಾಧಿಕಾರಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಮರಾಠಿ ಭಾಷೆ ಮಾತನಾಡುವವರೆಲ್ಲರೂ ಮರಾಠಾ ಸಮುದಾಯಕ್ಕೆ ಸೇರಿದವರಲ್ಲ' ಎಂದು ಸ್ಪಷ್ಟಪಡಿಸಲಾಗಿದೆ.
`ರಾಜ್ಯದಲ್ಲಿನ ಎಲ್ಲ ಮರಾಠರು ಮರಾಠಿ ಭಾಷೆ ಮಾತನಾಡುವುದಿಲ್ಲ. ಬಹುತೇಕ ಮಂದಿ ಕನ್ನಡ ಭಾಷೆ ಮಾತನಾಡುವವರು ಇದ್ದಾರೆ. ಬೆಳಗಾವಿ, ಬೀದರ್, ವಿಜಯಪುರ ಮಡಿಕೇರಿ, ಮೈಸೂರು ಸೇರಿದಂತೆ ಹಲವು ಕಡೆಗೆ ಮರಾಠಿ ಮಾತನಾಡುವವರು ಇದ್ದಾರೆ. ಇವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿಲ್ಲ. ರಾಜ್ಯದಲ್ಲಿರುವ ಮರಾಠಾ ಸಮುದಾಯವನ್ನು ಪ್ರವರ್ಗ 2 `ಎ'ಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಉನ್ನತ್ತಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಅದೇ ರೀತಿಯಲ್ಲಿ ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2 `ಎ'ಗೆ ಸೇರಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮರಾಠಾ ಸಮುದಾಯವನ್ನು ಎಂಇಎಸ್‍ನೊಂದಿಗೆ ತಳುಕು ಹಾಕಬೇಡಿ' ಎಂದು ಸಮುದಾಯ ಯುವ ಮುಖಂಡ ಚಂದ್ರಶೇಖರ್ ಎಸ್.ಚಿನಕೇಕರ ಆಗ್ರಹಿಸಿದ್ದಾರೆ.







