ಬಿಹಾರದಲ್ಲಿ ಹೀನಾಯ ಸೋಲಿನ ಹಿಂದಿನ ಕಾರಣ ತಿಳಿಸಿದ ಕಾಂಗ್ರೆಸ್ ನಾಯಕ
ವಿಧಾನಸಭಾ ಚುನಾವಣೆ

ಹೊಸದಿಲ್ಲಿ, ನ. 15: ಬಿಹಾರ ಚುನಾವಣೆಗೆ ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸುವಲ್ಲಿನ ವಿಳಂಬ ಮಹಾಮೈತ್ರಿಯ ಮತದಾನದ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ತಾರೀಕ್ ಅನ್ವರ್ ರವಿವಾರ ಹೇಳಿದ್ದಾರೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಅನ್ವರ್, ಕಾಂಗ್ರೆಸ್ ಬಿಹಾರದ ಚುನಾವಣೆಯಿಂದ ಪಾಠ ಕಲಿಯಬೇಕು ಹಾಗೂ ಇತರ ರಾಜ್ಯಗಳಲ್ಲಿ ಮುಂಬರುವ ವಿಧಾನ ಸಭಾಚುನಾವಣೆಯಲ್ಲಿ ಮೈತ್ರಿ ಔಪಚಾರಿಕತೆಯನ್ನು ಮೊದಲೇ ಪೂರ್ಣಗೊಳಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ಹಾಗೂ ಮೂರು ಎಡ ಪಕ್ಷಗಳೊಂದಿಗೆ ಪ್ರತಿಪಕ್ಷಗಳ ಮಹಾ ಮೈತ್ರಿ ಕೂಟ ರೂಪಿಸಿದ ಕಾಂಗ್ರೆಸ್ 70 ಸ್ಥಾನಗಳಲ್ಲಿ ಕೇವಲ 19 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸುವಲ್ಲಿ ಸಫಲವಾಗಿತ್ತು.
ಸಂದರ್ಶನವೊಂದರಲ್ಲಿ ಅನ್ವರ್, ಈ ಫಲಿತಾಂಶ ಕಾಂಗ್ರೆಸ್‌ನ ನಿರೀಕ್ಷೆಗಿಂತಲೂ ಕೆಳಮಟ್ಟದಲ್ಲಿ ಇತ್ತು. ಫಲಿತಾಂಶದ ಆತ್ಮಾವಲೋಕನ ಹಾಗೂ ಸಂಪೂರ್ಣ ವಿಶ್ಲೇಷಣೆಯಿಂದ ಹೈಕಮಾಂಡ್ ಗಂಭೀರವಾಗಿದೆ ಎಂದರು. ಸಾಮಾನ್ಯ ಜನರಲ್ಲಿ ಬದಲಾವಣೆ ಬಯಸುವ ವಾತಾವರಣ ಇತ್ತು. ಆದರೆ, ನಾವು ಅದನ್ನು ಬಳಸಿಕೊಳ್ಳಲಿಲ್ಲ ಎಂದು ಹೇಳಿದ ಅನ್ವರ್, ಕಾಂಗ್ರೆಸ್ 70 ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಕನಿಷ್ಠ ಶೇ. 50 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂಬ ನಿರೀಕ್ಷೆ ನಮಗಿತ್ತು ಎಂದರು.
ಸ್ಥಾನ ಹಂಚಿಕೆ ಅಂತಿಮಗೊಳಿಸುವಲ್ಲಿನ ವಿಳಂಬ ಪ್ರತಿಪಕ್ಷಗಳ ಮೈತ್ರಿಕೂಟ ಚುನಾವಣೆಯಲ್ಲಿ ಕಾರ್ಯಕ್ಷಮತೆಗೆ ಅಡ್ಡಿ ಉಂಟು ಮಾಡಿದೆಯೇ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನ್ವರ್, ಹೌದು, ಮೈತ್ರಿ ಹಾಗೂ ಇತರ ಔಪಚಾರಿಕತೆಗಳನ್ನು ದೃಢಪಡಿಸುವ ಪ್ರಕ್ರಿಯೆಯನ್ನು ನಾವು ಮುಗಿಸಬೇಕು ಎಂದು ಜುಲೈಯಲ್ಲಿ ರಾಹುಲ್ ಗಾಂಧಿ ಅವರು ಹೇಳಿರುವುದನ್ನು ನೆನಪಿಸುತ್ತೇನೆ ಎಂದರು.







