ಆಯ್ಕೆ ಸಮಿತಿ ಸದಸ್ಯರ ಹುದ್ದೆ ಗೆ ಅಜಿತ್ ಅಗರ್ಕರ್, ಮಣಿಂದರ್, ಚೇತನ್ ಶರ್ಮಾ, ದಾಸ್ ಕಣದಲ್ಲಿ

ಜಿತ್ ಅಗರ್ಕರ್,
ಹೊಸದಿಲ್ಲಿ, ನ.15: ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಖಾಲಿ ಇರುವ ಸದಸ್ಯರ ಮೂರು ಹುದ್ದೆಗಳಿಗೆ ನಾಲ್ವರು ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ.
ಭಾರತದ ಮಾಜಿ ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್, ಆರಂಭಿಕ ಆಟಗಾರ ಶಿವ ಸುಂದರ್ ದಾಸ್, ಮಾಜಿ ವೇಗಿಗಳಾದ ಅಜಿತ್ ಅಗರ್ಕರ್ ಮತ್ತು ಚೇತನ್ ಶರ್ಮಾ ಸ್ಪರ್ಧಾ ಕಣದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆಯ್ಕೆ ಸಮಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ರವಿವಾರ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದೀಗ ಈ ಹುದ್ದೆಗಳಿಗೆ ನಾಲ್ವರು ಪ್ರಬಲ ಅಭ್ಯರ್ಥಿಗಳಾಗಿ ಹೊರಹೊಮ್ಮಿದ್ದಾರೆ.
ಈ ವರ್ಷದ ಆರಂಭದಲ್ಲಿ ಸುನೀಲ್ ಜೋಶಿ ಮತ್ತು ಹರ್ವಿಂದರ್ ಸಿಂಗ್ ಅವರನ್ನು ಆಯ್ಕೆ ಸಮಿತಿಗೆ ನೇಮಕ ಮಾಡಲಾಗಿತ್ತು. ಇವರನ್ನು ಬಿಸಿಸಿಐ ನಿಯಮ ಪ್ರಕಾರ ಅಂದರೆ ವಲಯಗಳಿಗೆ ಪ್ರಾತಿನಿಧ್ಯ ನಿಯಮ ಪ್ರಕಾರ ನೇಮಕ ಮಾಡಿತ್ತು.
ಆದಾಗ್ಯೂ, ನವೀಕರಿಸಿದ ಬಿಸಿಸಿಐ ಸಂವಿಧಾನವು ಈ ನಿಯಮವನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಅತ್ಯುತ್ತಮ ಐದು ಅಭ್ಯರ್ಥಿಗಳನ್ನು ನೇಮಿಸಬೇಕು ಎಂದು ಹೇಳುತ್ತದೆ. ಮಂಡಳಿಯು ತನ್ನ ವಲಯ ನೀತಿಯನ್ನು ಅನುಸರಿಸುತ್ತಿದೆ. ಅದಕ್ಕಾಗಿಯೇ ಈ ನಿಯಮವನ್ನು ಉಲ್ಲೇಖಿಸಿಲ್ಲ.
ಅಗರ್ಕರ್ ಮತ್ತು ಮಣಿಂದರ್ ಸಿಂಗ್ ಈ ಮೊದಲು ಅರ್ಜಿ ಸಲ್ಲಿಸಿದ್ದರು. ‘‘ನಾನು ಕೊನೆಯ ಬಾರಿ ಅರ್ಜಿ ಸಲ್ಲಿಸಿದ್ದೆ. ನಾನು ಮತ್ತೆ ಅರ್ಜಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ ’’ಎಂದು ಮಣಿಂದರ್ ಸಿಂಗ್ ಆಂಗ್ಲ ದೈನಿಕವೊಂದಕ್ಕೆ ತಿಳಿಸಿದ್ದಾರೆ.
ಭಾರತದ ಮಾಜಿ ವೇಗಿ ಡೆಬಾಸಿಸ್ ಮೊಹಂತಿ ಕಿರಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರನ್ನು ರಾಷ್ಟ್ರೀಯ ತಂಡದ ಸಮಿತಿ ಸದಸ್ಯರಾಗಿ ಬಿಸಿಸಿಐ ಭಡ್ತಿ ನೀಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಅಜಿತ್ ಅಗರ್ಕರ್ 221 ಅಂತರ್ರಾಷ್ಟ್ರೀಯ ಪಂದ್ಯಗಳನ್ನು (191 ಏಕದಿನ, 26 ಟೆಸ್ಟ್, 4 ಟ್ವೆಂಟಿ-20) ಆಡಿರುವ ಅನುಭವ ಹೊಂದಿದ್ದಾರೆ,
ಚೇತನ್ ಶರ್ಮಾ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಬಂಗಾಳವನ್ನು ಪ್ರತಿನಿಧಿಸಿದ್ದರು.
‘‘ನಾನು ಸೆಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಸಮಿತಿಯ ಸಾಮಾನ್ಯ ಸದಸ್ಯನಾಗಿರುವುದರಲ್ಲಿ ನನಗೆ ಯಾವುದೇ ಸಮಸ್ಯೆಗಳಿಲ್ಲ. ಭಾರತದ ಕ್ರಿಕೆಟ್ಗೆ ಸೇವೆ ನೀಡುವುದು ನನ್ನ ಮುಖ್ಯ ಗುರಿ. ನಾನು ಸುನೀಲ್ ಗವಾಸ್ಕರ್, ಕಪಿಲ್ ದೇವ್, ದಿಲೀಪ್ ವೆಂಗ್ ಸರ್ಕಾರ್ ಅವರಂತಹ ದಂತಕಥೆಗಳೊಂದಿಗೆ ಆಡಿದ್ದೇನೆ, ಅವರಿಂದ ಬಹಳಷ್ಟು ಕಲಿತಿದ್ದೇನೆ’’ ಎಂದು ವಿಶ್ವ ಕಪ್ನಲ್ಲಿ (1987) ಭಾರತದ ಮೊದಲ ಹ್ಯಾಟ್ರಿಕ್ ವೀರ ಚೇತನ್ ಶರ್ಮಾ ಹೇಳಿದ್ದಾರೆ.
ಚೇತನ್ ಶರ್ಮಾ 88 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 54ರ ಹರೆಯದ ಚೇತನ್ ಶರ್ಮಾ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನಂತರ ದಕ್ಷಿಣ ವಲಯದ ಪರ ಎಂ.ಎಸ್.ಕೆ.ಪ್ರಸಾದ್ ಬದಲಿಗೆ ಜೋಶಿ ಆಗಮನವಾಯಿತು. ಗಗನ್ ಖೋಡಾ ಬದಲಿಗೆ ಹರ್ವಿಂದರ್ ಸೇರ್ಪಡೆಗೊಂಡರು.







