ದೇಶದಲ್ಲಿ ಜುಲೈ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿದ ಕೊರೋನ ಸೋಂಕು

ಹೊಸದಿಲ್ಲಿ : ದೇಶದಲ್ಲಿ ರವಿವಾರ ಸುಮಾರು 30 ಸಾವಿರ ಹೊಸ ಕೊರೋನ ಪ್ರಕರಣಗಳು ಪತ್ತೆಯಾಗಿದ್ದು, ಇದು 115 ದಿನಗಳಷ್ಟೇ ಕನಿಷ್ಠ ಸಂಖ್ಯೆಯಾಗಿದೆ. ಅಂತೆಯೇ ಸೋಂಕಿನಿಂದ 426 ಮಂದಿ ಮೃತಪಟ್ಟಿದ್ದು, ಇದು 163 ದಿನಗಳಲ್ಲೇ ಕನಿಷ್ಠ.
ಕಳೆದ ವಾರ ಅಂದರೆ ನವೆಂಬರ್ 8ರಿಂದ 15ರ ಅವಧಿಯಲ್ಲಿ ಒಟ್ಟು ದಾಖಲಾದ ಪ್ರಕರಣಗಳ ಸಂಖ್ಯೆ ಕೂಡಾ ಹಿಂದಿನ ವಾರಕ್ಕೆ ಹೋಲಿಸಿದರೆ ಕಡಿಮೆ. ಈ ವಾರದಲ್ಲಿ 2,92,549 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಅದಕ್ಕೂ ಹಿಂದಿನ ವಾರ ದೇಶದಲ್ಲಿ 3,25,555 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದವು. ಈ ವಾರ ದಾಖಲಾದ ಪ್ರಕರಣಗಳ ಸಂಖ್ಯೆ ಜುಲೈನಿಂದೀಚೆಗೆ ದಾಖಲಾದ ಕನಿಷ್ಠ ಸಂಖ್ಯೆಯಾಗಿದೆ.
ಅಂತೆಯೇ ಕಳೆದ ವಾರ ದೇಶಾದ್ಯಂತ 3476 ಮಂದಿ ಸೋಂಕಿಗೆ ಬಲಿಯಾಗಿದ್ದು, ಹಿಂದಿನ ವಾರ ದಾಖಲಾದ 4011ಕ್ಕೆ ಹೋಲಿಸಿದರೆ ಇದು 535ರಷ್ಟು ಕಡಿಮೆ. ಸಾವಿನ ಸಂಖ್ಯೆಯೂ ಜುಲೈ ಬಳಿಕ ದಾಖಲಾದ ಕನಿಷ್ಠ ಸಂಖ್ಯೆಯಾಗಿದೆ.
ದೆಹಲಿ ಸೇರಿದಂತೆ ಹಲವು ಉತ್ತರ ರಾಜ್ಯಗಳಲ್ಲಿ ಈ ವಾರದಲ್ಲಿ ಪ್ರಕರಣಗಳು ಏರುಗತಿಯಲ್ಲಿದ್ದರೂ, ಕೇರಳ ಹೊರತುಪಡಿಸಿ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಳಿಕೆ ಕಂಡುಬಂದಿದೆ. ಆದಾಗ್ಯೂ ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಮುಂದಿನ ವಾರ ಅತ್ಯಂತ ಮಹತ್ವದ್ದು ಎನ್ನಲಾಗಿದೆ.
ದೇಶದಲ್ಲಿ ರವಿವಾರ 30,126 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಜುಲೈ 13ರ ಬಳಿಕ ದಾಖಲಾದ ಕನಿಷ್ಠ ಪ್ರಮಾಣವಾಗಿದೆ. ಅಂತೆಯೇ 426 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಜುಲೈ 5ರ ಬಳಿಕ ಇದು ಕನಿಷ್ಠ ಸಂಖ್ಯೆಯಾಗಿದೆ. ಮುಂಬೈನಲ್ಲಿ ಮೇ ತಿಂಗಳ ಬಳಿಕ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕೆಳಗೆ ಇಳಿದಿದೆ.







