ಉಡುಪಿ: ಸುಡು ಬಿಸಿಲಿನ ತಾಪಕ್ಕೆ ಒದ್ದಾಡಿ ಅನಾರೋಗ್ಯ ಪೀಡಿತ ವ್ಯಕ್ತಿ ಮೃತ್ಯು
'ಕಣ್ಣಿದ್ದು ಕುರುಡಾದ ನಾಗರಿಕ ಸಮಾಜ'

ಉಡುಪಿ: ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರು ಸುಡು ಬಿಸಿಲಿನ ತಾಪಕ್ಕೆ ಒದ್ದಾಡಿ ದಾರುಣವಾಗಿ ಮೃತ ಪಟ್ಟ ಘಟನೆ ಆದಿ ಉಡುಪಿ ಮಾರ್ಕೆಟ್ ಬಳಿ ರವಿವಾರ ನಡೆದಿದೆ.
ಕೊನೆಯ ಘಳಿಗೆಯಲ್ಲಿ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ಆ ಹೊತ್ತಿಗೆ ವ್ಯಕ್ತಿಯು ಮೃತ ಪಟ್ಟಿದ್ದರು ಎಂದು ತಿಳಿದು ಬಂದಿದೆ.
'ಬಿಸಿಲಿನಲ್ಲಿ ಬಿದ್ದು ಒದ್ದಾಡುತ್ತಿರುವ ವ್ಯಕ್ತಿಯನ್ನು ಅದೇ ರಸ್ತೆಯಲ್ಲಿ ಹಾದು ಹೋಗುವ ನೂರಾರು ಮಂದಿ ಕಂಡರೂ ಕಂಡರಿಯದಂತೆ ಸಾಗಿದ್ದರು. ಆ ಸಮಯದಲ್ಲಿ ಯಾರಾದರೂ ತುರ್ತಾಗಿ ನೆರವಿಗೆ ಬಂದಲ್ಲಿ ಖಂಡಿತವಾಗಿಯೂ ವ್ಯಕ್ತಿಯ ಪ್ರಾಣ ಉಳಿಸಬಹುದಿತ್ತು' ಎಂದು ವಿಶು ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.
'ನನಗೆ ತಡವಾಗಿ ಮಾಹಿತಿ ಸಿಕ್ಕಿದೆ. ಕಾರ್ಯದಲ್ಲಿ ನಿರತನಾದರೂ ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಅರ್ಧ ಗಂಟೆ ಮೊದಲು ಆಸ್ಪತ್ರೆಗೆ ಬಂದಿದ್ದರೆ ಚಿಕಿತ್ಸೆಗೆ ರೋಗಿ ಸ್ಪಂದಿಸಿ ಬದುಕುಳಿಯುತಿದ್ದರು ಎಂಬ ಅಭಿಪ್ರಾಯವನ್ನು ಪರೀಕ್ಷಿಸಿದ ವೈದ್ಯರು ವ್ಯಕ್ತಪಡಿಸಿದ್ದರು' ಎಂದು ಅವರು ಹೇಳಿದ್ದಾರೆ.
ಯಾವುದೇ ವ್ಯಕ್ತಿ ಅನಾರೋಗ್ಯ ಅಥವಾ ಮಧ್ಯ ಸೇವಿಸಿ ಬಿಸಿಲಿನಲ್ಲಿ ಬಿದ್ದಿದ್ದರೆ, ಕೂಡಲೇ ರಕ್ಷಣೆ ಮಾಡಬೇಕಾದ ಕರ್ತವ್ಯ ಪ್ರಜ್ಞೆ ನಾಗರಿಕದಾಗಿರಬೇಕು. ಇಲ್ಲವಾದಲ್ಲಿ ಸಾವು ಖಚಿತ. ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಮಡದಿ ರೋಧಿಸುತ್ತಿರುವುದು ಕಂಡಾಗ ಮನಕಲುಕುವಂತಿತ್ತು. ಆಕೆ ವಿಧವೆ ಆಗುವುದನ್ನು ತಪ್ಪಿಸುವ ಸಾಧ್ಯತೆಗಳಿದ್ದವು. ನಾಗರಿಕ ಸಮಾಜ ಕೆಲವೊಮ್ಮೆ ಕಣ್ಣಿದ್ದು ಕುರುಡಾಗಿ ಬದುಕುವ ಜೀವ ಸಾಯುವ ಹಾಗೆ ಆಗುತ್ತದೆ. ನೋಡಿಯೂ ಕರುಣೆ ತೋರದ ಕಣ್ಣುಗಳು ಮುಂದಿನ ದಿನಗಳಲ್ಲಾದರು ಇಂಥಹ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ಹೃದಯ ಶ್ರೀಮಂತಿಕೆ ಬೆಳಸಿಕೊಳ್ಳಲಿ' ಎಂದು ವಿಶು ಶೆಟ್ಟಿ ಅಂಬಲಪಾಡಿ ಆಶಯ ವ್ಯಕ್ತ ಪಡಿಸಿದ್ದಾರೆ.







