ಗಾಂಧಿ ಹಂತಕ ‘ಗೋಡ್ಸೆ ಮಹಾನ್ ದೇಶಭಕ್ತ' ಎಂದು ಟ್ವೀಟ್ ಮಾಡಿದ ಬಿಜೆಪಿ ನಾಯಕ!
ಟ್ವಿಟರಿಗರ ಭಾರೀ ಆಕ್ರೋಶದ ಬಳಿಕ ಡಿಲಿಟ್

ಹೊಸದಿಲ್ಲಿ: ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯನ್ನು ‘ಮಹಾನ್ ದೇಶಭಕ್ತ' ಎಂದು ಬಣ್ಣಿಸಿ ಟ್ವೀಟ್ ಮಾಡಿದ ಆಂಧ್ರ ಪ್ರದೇಶದ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ರಮೇಶ್ ನಾಯ್ಡು ನಾಗೊತ್ತು, ಟ್ವಿಟರಿಗರ ಆಕ್ರೋಶದ ಬಳಿಕ ತಮ್ಮ ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಿದ್ದಾರೆ.
“ಇಂದು, ನಾಥೂರಾಂ ಗೋಡ್ಸೆ ಅವರ ಪುಣ್ಯತಿಥಿಯಂದು ಅವರಿಗೆ ಅತ್ಯಂತ ಗೌರವದಿಂದ ನಮಿಸುತ್ತೇನೆ. ಭಾರತಭೂಮಿಯಲ್ಲಿ ಹುಟ್ಟಿದ ನೈಜ ಹಾಗೂ ಮಹಾನ್ ದೇಶಭಕ್ತ'' ಎಂದು ನಾಯ್ಡು ಟ್ವೀಟ್ ಮಾಡಿದ್ದರು.
ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಇನ್ನೊಂದು ಟ್ವೀಟ್ ಮಾಡಿದ ಬಿಜೆಪಿ ನಾಯಕ ``ಆಕ್ಷೇಪಾರ್ಹ ಟ್ವೀಟ್ ಅನ್ನು ತನ್ನ ಟ್ವಿಟರ್ ಹ್ಯಾಂಡಲ್ ನಿರ್ವಹಿಸುವ ಬೇರೆ ಯಾರೋ ಮಾಡಿದ್ದರು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ'' ಎಂದು ಬರೆದಿದ್ದಾರೆ.
ಈ ಹಿಂದೆ ಭೋಪಾಲ್ ಸಂಸದೆ ಪ್ರಜ್ಞಾ ಠಾಕುರ್ ಕೂಡ ಗೋಡ್ಸೆಯನ್ನು ದೇಶಭಕ್ತನೆಂದು ಹೇಳಿ ವಿವಾದಕ್ಕೀಡಾಗಿದ್ದರು.
ಹಿಂದು ಮಹಾಸಭಾ ರವಿವಾರದಂದು ಗ್ವಾಲಿಯರ್ ನಲ್ಲಿ ಗೋಡ್ಸೆ ಹಾಗೂ ಗಾಂಧಿ ಹತ್ಯೆ ಪ್ರಕರಣದಲ್ಲಿ ಗೋಡ್ಸೆ ಜತೆಗೆ ಮರಣದಂಡನೆಗೆ ಗುರಿಯಾದ ನಾರಾಯಣ ಆಪ್ಟೆಯ 71ನೇ ಪುಣ್ಯತಿಥಿಯನ್ನು ಆಚರಿಸಿದೆ.