ಆತ್ಮನಿರ್ಭರ ಅಡಿ ಹೆಚ್ಚುವರಿ 600 ಕೋಟಿ ರೂ. ಅನುದಾನಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ : ಸಚಿವ ಸೋಮಶೇಖರ್
'15 ಲಕ್ಷ ರೈತರಿಗೆ 9945 ಕೋಟಿ ರೂ. ಸಾಲ'

ದಾವಣಗೆರೆ: ಪ್ರತಿವರ್ಷ ಜವಹರಲಾಲ್ ಅವರ ಹುಟ್ಟುಹಬ್ಬದ ಅಂಗವಾಗಿ 7 ದಿನಗಳ ಕಾಲ ಸಹಕಾರ ಸಪ್ತಾಹವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಹಕಾರ ಕ್ಷೇತ್ರದಿಂದ ಏನೆಲ್ಲ ಬೆಳವಣಿಗೆಗಳಾಗಿವೆ, ಇನ್ನು ಏನು ಮಾಡಲಿದ್ದೇವೆ ಎಂಬುದನ್ನು ಜನರಿಗೆ ತಿಳಿಸುವಂತಹ ಕಾರ್ಯವನ್ನು ನಾವು ಮಾಡಲಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹ - 2020 ಕಾರ್ಯಕ್ರಮಕ್ಕಾಗಿ ದಾವಣಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆಯಲ್ಲಿ 3ನೇ ದಿನದ ಕಾರ್ಯಕ್ರಮ ನಡೆಯುತ್ತಲಿದೆ. ಈ ಮೂಲಕ ಸಹಕಾರ ಕ್ಷೇತ್ರವನ್ನು ಜನರಿಗೆ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುವ ಕೆಲಸವಾಗುತ್ತದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
15 ಲಕ್ಷ ರೈತರಿಗೆ 9945 ಕೋಟಿ ರೂ. ಸಾಲ
ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿರೈತರಿಗೆ ಕೃಷಿ ಸಾಲ ಒದಗಿಸಲು ಕೇಂದ್ರ ಸರ್ಕಾರವು “Special Liquidity Facility” ಅಡಿಯಲ್ಲಿ 1700 ಕೋಟಿ ರೂ.ಗಳನ್ನು ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕುಗಳಿಗೆ ನೀಡಲಾಗಿದ್ದು, ರೈತರ ಸಂಕಷ್ಟದ ಸಮಯದಲ್ಲಿ ಕೃಷಿಗೆ ಅವಶ್ಯಕವಾದ ಸಾಲವನ್ನು ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 24 ಲಕ್ಷ ರೈತರಿಗೆ 15300 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಅನ್ನು ಆತ್ಮನಿರ್ಭರ ಯೋಜನೆಯಡಿ ಘೋಷಣೆ ಮಾಡಿತು. ಅದರಲ್ಲಿ ರಾಜ್ಯದ ಪಾಲಾದ 4750 ಕೋಟಿ ರೂಪಾಯಿಗಳು ಬಂದಿದ್ದು, ಇದರ ಮೂಲಕ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ಸಹಕಾರ ಇಲಾಖೆ ಮೂಲಕ ವಿತರಣೆ ಮಾಡಲಾಗುತ್ತಿದೆ. ಆದರೆ, ಸಹಕಾರ ಇಲಾಖೆಗೆ ಆರ್ಥಿಕ ನಿರ್ಭರದಡಿ ಇನ್ನೂ ಹೆಚ್ಚಿನ ಅನುದಾನ ಬೇಕಿರುವುದರಿಂದ 600 ಕೋಟಿ ರೂಪಾಯಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಚಿವರು ತಿಳಿಸಿದರು.
ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಶೂನ್ಯ ಬಡ್ಡಿದರದಲ್ಲಿ 2ರಿಂದ 3 ಲಕ್ಷ ರೂ.ವೆರೆಗೆ ಸಾಲ ನೀಡಲಾಗುತ್ತಿದೆ. ಈ ಮೂಲಕ ರೈತರ ಸ್ವಾವಲಂಬನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.







