ಬಿ.ವೈ.ವಿಜಯೇಂದ್ರನ ವೈಭವೀಕರಣ ಯಾಕೆ: ಸಚಿವ ಈಶ್ವರಪ್ಪ ಪ್ರಶ್ನೆ

ಶಿವಮೊಗ್ಗ, ನ.17: ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ ಬಿ.ವೈ.ವಿಜಯೇಂದ್ರರ ಪಾತ್ರ ಇದೆ ಎಂದು ಕೆಲ ಮಾಧ್ಯಮಗಳು ವೈಭವೀಕರಿಸುತ್ತಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜೇಯೇಂದ್ರರನ್ನು ವೈಭವಿಕರಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೂ ಬಿಜೆಪಿ ಎಂದಿಗೂ ಒಬ್ಬ ವ್ಯಕ್ತಿಯ ಮೇಲೆ ಚುನಾವಣೆ ಎದುರಿಸುವುದಿಲ್ಲ. ಸಂಘಟಿತ ಪ್ರಯತ್ನದಿಂದ ಚುನಾವಣೆ ಮಾಡಿ ಗೆಲವು ಸಾಧಿಸುತ್ತಿದ್ದೇವೆ ಎಂದರು.
ಚುನಾವಣೆ ಸಂದರ್ಭ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ನಾಲ್ಕರಿಂದ ಐದು ಜನರನ್ನು ನಮ್ಮ ನಾಯಕರು ಉಸ್ತುವಾರಿ ನೇಮಿಸುತ್ತಾರೆ. ಅದೇ ಮಾದರಿಯಲ್ಲಿ ಶಿರಾ ಹಾಗೂ ಆರ್.ಆರ್.ನಗರಕ್ಕೂ ಉಸ್ತುವಾರಿ ನೇಮಿಸಲಾಗಿತ್ತು. ಶಿರಾದಲ್ಲಿ ಕೆಲಸ ಮಾಡಿದಂತೆ, ಆರ್.ಆರ್. ನಗರದಲ್ಲಿ ಆಶೋಕ ಕೆಲಸ ಮಾಡಿದ್ದಾರೆ. ವಿಜಯೇಂದ್ರ ಅವರ ಪ್ರಯತ್ನ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದ್ರೇ ವಿಜಯೇಂದ್ರ ಅವರನ್ನು ಅತಿಯಾಗಿ ವೈಭವಿಕರಿಸಲಾಗುತ್ತದೆ ಎಂದ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ - ಹರಿಪ್ರಸಾದ್ ವಿರುದ್ದ ಗರಂ:
ಆರೆಸ್ಸೆಸ್ ಜಾತಿವಾದಿ ಸಂಘಟನೆ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೆಸ್ಸೆಸ್ ನವರಿಗೆ ರಾಷ್ಟ್ರಧ್ವಜ ಹಾರಿಸಲು ಅರ್ಹತೆ ಇಲ್ಲ ಎಂದಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿರುದ್ಧ ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರು ಆರೆಸ್ಸೆಸ್ ಬಗ್ಗೆ ತಿಳುವಳಿಕೆ ಇಲ್ಲದೇ ಮಾತನಾಡಿದ್ದಾರೆ. ಆರೆಸ್ಸೆಸ್ ನಿಂದ ಸಂಸ್ಕಾರ ಪಡೆದ ಸಾವಿರಾರು ಜನರು ಇಂದು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಆರೆಸ್ಸೆಸ್ ಬಗ್ಗೆ ಏನು ಕಲ್ಪನೆಯಿಲ್ಲದೇ ಮಾತಾಡಲು ಅವರಿಗೆ ಏನು ಅಧಿಕಾರವಿಲ್ಲ. ಟೀಕೆ ಮಾಡುವುದಾದರೇ ವೈಯಕ್ತಿಕ ಟೀಕೆ ಮಾಡಲಿ. ಅದನ್ನು ಬಿಟ್ಟು ತಿಳುವಳಿಕೆ ಇಲ್ಲದೇ ಮಾತನಾಡಬೇಡಿ ಎಂದ ಅವರು, ಈವರೆಗೆ ಪಕ್ಷ ಹಾಗೂ ನಾಯಕರ ಟೀಕೆ ಮಾಡಿದ್ದಕ್ಕೆ ಕಾಂಗ್ರೆಸ್ ಮೂಲೆ ಗುಂಪಾಗಿದೆ. ಇನ್ನೂ ಆರೆಸ್ಸೆಸ್ ಟೀಕೆ ಮಾಡಿದರೇ ಕಾಂಗ್ರೆಸ್ ಪಕ್ಷ ಧೂಳಾಗಿ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿ.ಜೆ.ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಬಂಧನಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಅಧಿಕಾರದ ಆಸೆಗೆ ಕಾಂಗ್ರೆಸ್ಸಿಗರು ಯಾರನ್ನಾದರೂ ಸುಡುತ್ತಾರೆ. ಸುಟ್ಟವರನ್ನು ರಕ್ಷಣೆಯನ್ನೂ ಮಾಡುತ್ತಾರೆ ಎಂದು ಹೇಳಿದರು.
ತನ್ನ ಮನೆ ಸುಡಲು ಕಾಂಗ್ರೆಸ್ಸಿಗರೇ ಕಾರಣ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದರು. ದೇಶದ್ರೋಹಿ ಸಂಘಟನೆಗಳು ತುಂಬಾ ದಿನದಿಂದ ಪ್ಲಾನ್ ಮಾಡಿ ಈ ಕೆಲಸ ಮಾಡಿದ್ದರು. ಅವರೆಲ್ಲರ ಬಂಧನ ಈಗಾಗಲೇ ಆಗಿದೆ. ಆರಂಭದಲ್ಲಿ ಸರಕಾರವೇ ಈ ಕೆಲಸ ಮಾಡಿದೆ ಎಂದು ಕಾಂಗ್ರೆಸ್ಸಿನವರು ಬಿಂಬಿಸಿದ್ದರು ಎಂದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಅಖಂಡ ಶ್ರೀನಿವಾಸ ಮೂರ್ತಿ ಬೆನ್ನಿಗೆ ನಿಂತಿಲ್ಲ. ತಾವು ಅಧಿಕಾರಕ್ಕೆ ಬರಲು ಯಾರು ತಮ್ಮ ಬೆನ್ನ ಹಿಂದೆ ನಿಲ್ಲುತ್ತಾರೆಯೋ ಅವರ ಬೆನ್ನ ಹಿಂದೆ ಸಿದ್ದರಾಮಯ್ಯ, ಡಿಕೆಶಿ ನಿಲ್ಲುತ್ತಾರೆ. ದೇಶದ್ರೋಹಿಗಳನ್ನು ರಕ್ಷಣೆ ಮಾಡುವುದೇ ಕಾಂಗ್ರೆಸ್ ಅಜೆಂಡಾ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ, ಮುಖಂಡರಾದ ಎಸ್.ದತ್ತಾತ್ರಿ, ನಾಗರಾಜ್, ಅಣ್ಣಪ್ಪ ಸೇರಿದಂತೆ ಹಲವರಿದ್ದರು.







