ಪಟಾಕಿ ಸಿಡಿಸಿದಾಗ ಬೆಂಕಿ ಅವಘಡ: ಬಿಜೆಪಿ ಸಂಸದೆಯ ಮೊಮ್ಮಗಳು ಮೃತ್ಯು

ಸಾಂದರ್ಭಿಕ ಚಿತ್ರ
ಪ್ರಯಾಗ್ರಾಜ್: ಪ್ರಯಾಗ್ರಾಜ್ ಕ್ಷೇತ್ರದ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಷಿ ಅವರ ಆರು ವರ್ಷದ ಮೊಮ್ಮಗಳು ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿಸುವ ವೇಳೆ ನಡೆದ ಅವಘಡದಲ್ಲಿ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾಳೆ.
ದೀಪಾವಳಿ ಆಚರಣೆ ಸಂದರ್ಭ ಇತರ ಮಕ್ಕಳ ಜತೆಗೆ ಆಡಲೆಂದು ಟೆರೇಸ್ಗೆ ತೆರಳಿದ್ದ ಬಾಲಕಿ ಧರಿಸಿದ್ದ ಅಂಗಿಗೆ ಪಟಾಕಿಯ ಬೆಂಕಿ ತಗಲಿತ್ತೆನ್ನಲಾಗಿದೆ. ಆದರೆ ಸುತ್ತಮುತ್ತಲೆಲ್ಲಾ ಪಟಾಕಿಯ ಸದ್ದಿನಿಂದಾಗಿ ಆಕೆಯ ಅಳು ಹಾಗೂ ಚೀರಾಟ ಯಾರಿಗೂ ಕೇಳಿಸಿರಲಿಲ್ಲ. ಆಕೆ ಸುಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಂತರ ಕೆಲವರು ಗಮನಿಸಿದ್ದರು. ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಕೆಯ ಜೀವ ಉಳಿಸಲಾಗಿಲ್ಲ. ಆಕೆಗೆ ಶೇ. 60ರಷ್ಟು ಸುಟ್ಟ ಗಾಯಗಳಾಗಿತ್ತು.
ಬಾಲಕಿಯನ್ನು ದಿಲ್ಲಿಯ ಮಿಲಿಟರಿ ಆಸ್ಪತ್ರೆಗೆ ಏರ್ ಅಂಬ್ಯುಲೆನ್ಸ್ ನಲ್ಲಿ ಸಾಗಿಸುವ ಯೋಚನೆಯೂ ಇತ್ತು. ಆದರೆ ಆಕೆ ಅದಾಗಲೇ ಮೃತಪಟ್ಟಿದ್ದಳು.
ಮೊಮ್ಮಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಸಂಸದೆ ರೀಟಾ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಹರ್ಷ ವರ್ಧನ್ ಹಾಗೂ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರಲ್ಲಿ ಮಾತನಾಡಿದ್ದರು.





