ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ: ಸಚಿವ ಪ್ರಭು ಚೌಹಾಣ್

ವಿಜಯಪುರ, ನ.17: ಕೋವಿಡ್ 19ನಿಂದಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ವಿಳಂಬವಾಗಿದೆ. ಆದರೆ, ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ ಭರವಸೆ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿದಲ್ಲಿ ಉಂಟಾಗುವ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲು ಇಲಾಖೆ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಸದರಿ ಸಮಿತಿ ಈಗಾಗಲೇ ಗೋಹತ್ಯೆ ನಿಷೇಧಿಸಿರುವ ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲಿದೆ. ಈ ವರದಿ ಬರುತ್ತಲೇ ಪರಿಶೀಲನೆ ನಡೆಸಿ, ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದರು. ಯಾವುದೇ ಕಾರಣಕ್ಕೂ ಕಸಾಯಿಖಾನೆಗೆ ಗೋವುಗಳು ಹೋಗದಂತೆ ತಡೆಯಬೇಕಿದೆ. ಗೋವು ನಮ್ಮೆಲ್ಲರನ್ನು ಸಲಹುವ ಮಾತೆ. ಆಕೆಯ ಸಂರಕ್ಷಣೆ ನಮ್ಮ ಹೊಣೆಯಾಗಬೇಕು ಎಂದು ಹೇಳಿದ್ದಾರೆ.
ದೀಪಾವಳಿಗೆ ಸಿಎಂ ಯಡಿಯೂರಪ್ಪ ಮರಾಠ ಹಾಗೂ ಲಿಂಗಾಯತರಿಗೆ ಡಬಲ್ ಧಮಾಕ ನೀಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಅನುಕೂಲವಾಗಲಿದೆ. ಅಲ್ಲದೇ, ಮರಾಠ ಪ್ರಾಧಿಕಾರಕ್ಕೆ ಸಿಎಂ 50 ಕೋಟಿ ಅನುದಾನ ನೀಡಿದ್ದು ಸಂತಸ ತಂದಿದೆ ಎಂದರು. ಇನ್ನು ಹೈಕಮಾಂಡ್, ಸಿಎಂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡ್ತಾರೆ. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದರು.







