ದ.ಕ.: ಸ್ಯಾಂಡ್ ಆ್ಯಪ್ ಬಜಾರ್ ಮೂಲಕ ಮರಳು ವಿತರಿಸಲು ಮನವಿ

ಮಂಗಳೂರು, ನ.17: ದ.ಕ.ಜಿಲ್ಲೆಯಲ್ಲಿ ಸ್ಯಾಂಡ್ ಆ್ಯಪ್ ಬಜಾರ್ ಮೂಲಕ ಮರಳು ವಿತರಿಸಬೇಕು ಎಂದು ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಐವನ್ ಡಿಸೋಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಂಗಳವಾರ ದ.ಕ.ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸ್ಯಾಂಡ್ ಬಜಾರ್ ಆ್ಯಪ್ ತಯಾರಿಸಿ ಸರಕಾರ ನಿಗದಿ ಮಾಡಿದ ದರದಲ್ಲಿ ಮರಳನ್ನು ವಿತರಿಸಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮರಳು ಸಿಗಲು ಸಾಧ್ಯವಾಗಿದೆ. ಈ ಬಗ್ಗೆ ಜನರಿಂದ ಶ್ಲಾಘನೀಯ ವ್ಯಕ್ತವಾಗಿತ್ತು. ಪ್ರಸ್ತುತ 3 ಯುನಿಟ್ ಮರಳಿಗೆ 17,000 ರೂ.ನಿಂದ 20,000 ರೂ. ದರವಿದೆ. ಸಿಮೆಂಟಿಗಿಂತಲೂ ಮರಳಿನ ದರ ಜಾಸ್ತಿಯಾದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಹಾಗಾಗಿ ಸ್ಯಾಂಡ್ ಬಝಾರ್ ಮೂಲಕ ಗ್ರಾಹಕರಿಗೆ ಕಡಿಮೆ ಮತ್ತು ನ್ಯಾಯಯುತ ದರದಲ್ಲಿ ಗುಣಮಟ್ಟದ ಮರಳನ್ನು ಒದಗಿಸಿಕೊಳ್ಳಲು ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲೆಯಲ್ಲಿ 89 ಮಂದಿಗೆ ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗುತ್ತಿದೆ ಎಂಬ ಮಾಹಿತಿಯಿದೆ. ರಾಜಕೀಯ ಒತ್ತಡಕ್ಕೊಳಪಟ್ಟು ಬಿಜೆಪಿಯ 50 ಕಾರ್ಯಕರ್ತರಿಗೆ ಕಾನೂನು ಉಲ್ಲಂಘಿಸಿ ಪರವಾನಿಗೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಸಿಆರ್‌ಝಡ್‌ನಲ್ಲಿ ಹೊರರಾಜ್ಯ ಮತ್ತು ಜಿಲ್ಲೆಗಳಿಗೆ ಕಾನೂನುಬಾಹಿರವಾಗಿ ಮರಳು ವಿತರಣೆಯಾಗುತ್ತಿದೆ. ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕುಟುಂಬದವರು ಸಾಂಪ್ರದಾಯಿಕವಾಗಿ ಮರಳು ತೆಗೆಯುವ ಕಸುಬನ್ನು ಮಾಡುವವರಿಗೆ ಮರಳು ತೆಗೆಯಲು ಪರವಾನಿಗೆ ನೀಡುವುದಿಲ್ಲ ಎಂಬ ವಿಚಾರವನ್ನು ಪುನರ್‌ಪರಿಶೀಲಿಸುವಂತೆ ಮನವಿ ಮಾಡಲಾಯಿತು.







