ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್

ಬೆಂಗಳೂರು, ನ.17: ಬಿಲ್ಡರ್ ರಾಜು ಪಾಟೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ನಗರದ 62ನೆ ಎಸಿಎಂಎಂ ಕೋರ್ಟ್ 10 ದಿನಗಳ ಕಾಲ ಮುಂಬೈ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ಬಿಲ್ಡರ್ ರಾಜು ಪಾಟೀಲ್ ಹತ್ಯೆ ಪ್ರಕರಣ ಸಂಬಂಧ ಮುಂಬೈ ನ್ಯಾಯಾಲಯದ ಎದುರು ಹಾಜರುಪಡಿಸಲು ಮುಂಬೈ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ನೀಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್ ಮಾಣಿಕ್ಯ ಅವರು ಆರೋಪಿಯನ್ನು 10 ದಿನಗಳ ಕಾಲ ಮುಂಬೈ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ವಿಚಾರಣೆ ಸಂದರ್ಭದಲ್ಲಿ ಆರೋಪಿ ಪರ ವಕೀಲರು ವಾದಿಸಿ, ರವಿ ಪೂಜಾರಿಯನ್ನು ಈ ಸಂದರ್ಭದಲ್ಲಿ ಮುಂಬೈ ಪೊಲೀಸರ ವಶಕ್ಕೆ ನೀಡುವುದು ಸೂಕ್ತವಲ್ಲ. ಮುಂಬೈನಲ್ಲಿ ಕೊರೋನ ಹೆಚ್ಚಾಗಿದೆ. ಅಲ್ಲದೇ ರವಿ ಪ್ರಾಣಕ್ಕೆ ಬೆದರಿಕೆ ಇದೆ. ಹೀಗಾಗಿ ವಶಕ್ಕೆ ನೀಡಬಾರದು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೂಜಾರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಹಾಗೂ ಕೊರೋನ ಸೋಂಕು ತಗಲದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರ್ಟ್, ಪೊಲೀಸರಿಗೆ ಸೂಚಿಸಿದೆ.
ಬಿಲ್ಡರ್ ರಾಜು ಪಾಟೀಲ್ ಹತ್ಯೆಗೆ ಸಂಬಂಧಿಸಿದಂತೆ 2015ರಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ಕೃತ್ಯ ನಿಯಂತ್ರಣ (ಎಂಸಿಒಸಿಎ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ರವಿ ಪೂಜಾರಿಯನ್ನು ಮುಂಬೈ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲು ಅಗತ್ಯವಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಬೆಂಗಳೂರಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.







