'ವೀರಶೈವ-ಲಿಂಗಾಯತ'ದ ಬೆನ್ನಲ್ಲೇ ಅಭಿವೃದ್ಧಿ ನಿಗಮಕ್ಕೆ ಬೇಡಿಕೆ ಇಟ್ಟ ಒಕ್ಕಲಿಗರು

ಬೆಂಗಳೂರು, 17: ರಾಜ್ಯದಲ್ಲಿ ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ' ರಚನೆ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ‘ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ' ರಚನೆ ಮಾಡಿ ಆದೇಶ ಹೊರಡಿಸಿದ್ದು, ಒಕ್ಕಲಿಗರ ಅಭಿವೃದ್ಧಿ ನಿಗಮ ಸೇರಿದಂತೆ ಇನ್ನಿತರ ಸಮುದಾಯಗಳು ನಿಮಗ ಸ್ಥಾಪಿಸಲು ಬೇಡಿಕೆಯನ್ನಿಡುತ್ತಿವೆ.
ಮರಾಠಾ ಪ್ರಾಧಿಕಾರ ರಚನೆ ಘೋಷಣೆ ಬೆನ್ನಲ್ಲೆ ರಾಜ್ಯದಲ್ಲಿ ಪ್ರಾಧಿಕಾರ ಹಿಂಪಡೆಯಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಡಿ.5ಕ್ಕೆ ಬಂದ್ ಕರೆಯನ್ನು ನೀಡಲು ಸಿದ್ಧತೆ ನಡೆಸಿವೆ. ಈ ಮಧ್ಯೆ ಬೀದರ್ ಜಿಲ್ಲೆಯ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯನ್ನು ದೃಷ್ಟಿಯಲ್ಲಿ ಮರಾಠಾ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆಯೆ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ತೀರ್ಮಾನವನ್ನು ರಾಜ್ಯದಲ್ಲಿರುವ ಮರಾಠಾ ಸಮುದಾಯದ ಸಾಹಿತಿಗಳು ಮತ್ತು ಗಣ್ಯರು ಸ್ವಾಗತಿಸಿದ್ದಾರೆ.
ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆಯಾಗಲಿ: ರಾಜ್ಯದಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಆದೇಶ ನೀಡಿರುವ ವಿಚಾರದ ಬೆನ್ನಲ್ಲೇ ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ನಿರ್ಧಾರಕ್ಕೆ ಸ್ವಾಗತ. ಇದರ ಜತೆಗೆ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಮಾದರಿಯಲ್ಲೇ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನೂ ರಚಿಸಲಿ ಎಂದು ಇದೇ ವೇಳೆ ಆಗ್ರಹಿಸಿದರು.
ರಾಜ್ಯದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒಕ್ಕಲಿಗ ಸಮುದಾಯದ ನಾಯಕರು ಭೇಟಿ ಮಾಡಿ ಒತ್ತಾಯ ಮಾಡುತ್ತೇವೆ. ವೀರಶೈವ-ಲಿಂಗಾಯತ ಸಮುದಾಯ ದೊಡ್ಡದು, ಅದೇ ರೀತಿ ಒಕ್ಕಲಿಗ ಸಮುದಾಯವೂ ದೊಡ್ಡದು. ಅಲ್ಲದೆ ಒಕ್ಕಲಿಗ ಸಮುದಾಯದಲ್ಲೂ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.







