ಸಂಪತ್‌ರಾಜ್ ಬಂಧನ ರಾಜಕೀಯ ಪ್ರೇರಿತ: ಸಲೀಂ ಅಹ್ಮದ್
ಉಡುಪಿ, ನ.17: ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್‌ರಾಜ್ ಬಂಧನ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ತನಿಖೆಗೆ ನಮ್ಮ ಯಾವುದೇ ವಿರೋಧವಿಲ್ಲ. ಪೊಲೀಸರು ಕಾನೂನು ಪಾಲನೆ ಮಾಡಲಿ. ಆದರೆ ತನಿಖೆಯ ನೆಪದಲ್ಲಿ ರಾಜಕೀಯ ಹಿತಾಸಕ್ತಿ ಸಾಧಿಸಲು ಮುಂದಾಗಬಾರದು ಎಂದವರು ಹೇಳಿದರು.
ರಾಜ್ಯದ ಬಿಜೆಪಿ ಸರಕಾರ ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿಕೊಂಡು ಕಾರ್ಯಾಚರಿಸುತಿದ್ದಾರೆ. ಪೊಲೀಸರಿಗಿಂತ ಮೊದಲೇ ಬಿಜೆಪಿ ನಾಯಕರು ಹೇಳಿಕೆ ನೀಡುತಿದ್ದಾರೆ. ಅವರೇನು ಪೊಲೀಸ್ ಅಧಿಕಾರಿಗಳಾ, ಕಾನೂನು ಸಚಿವರಾ ಎಂದು ಸಲೀಂ ಅಹ್ಮದ್ ಖಾರವಾಗಿ ಪ್ರಶ್ನಿಸಿದರು.
ಡಿಜೆ ಹಳ್ಳಿ ಕೆಜಿ ಹಳಳಿ ಪ್ರಕರಣದಲ್ಲಿ ನೂರಕ್ಕೂ ಅಧಿಕ ಮಂದಿಯ ಬಂಧನವಾಗಿದೆ. ಈ ಘಟನೆ ಪೊಲೀಸ್ ಇಲಾಖೆಯ ವೈಫಲ್ಯದಿಂದಲೇ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಮಂದಿ ಅಮಾಯಕರನ್ನು ಬಂಧಿಸಲಾಗಿದೆ ಎಂದವರು ಆರೋಪಿಸಿದರು.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಕಾಂಗ್ರೆಸ್ ಪಕ್ಷದ ನಾಯಕ. ಅವರ ಜೊತೆಗೆ ಇಡೀ ಕಾಂಗ್ರೆಸ್ ಪಕ್ಷವಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಅವರು ಹೇಳಿರುವುದು ಸರಿಯಾಗಿಯೇ ಇದೆ ಎಂದು ಸಲೀಂ ಅಹ್ಮದ್ ನುಡಿದರು.
ಆದರೆ ರಾಜಕೀಯ ಪ್ರೇರಿತವಾಗಿ ವಿರೋಧ ಪಕ್ಷವನ್ನು ಟಾರ್ಗೆಟ್ ಮಾಡುತ್ತಿರುವುದು ಖಂಡಿತ ಸರಿಯಲ್ಲ ಎಂದು ಅವರು ಹೇಳಿದರು.