ಉಡುಪಿ: ಸರಕಾರಿ ಕಾಲೇಜುಗಳಲ್ಲಿ 1136 ವಿದ್ಯಾರ್ಥಿಗಳಿಗೆ ಕೊರೋನ ‘ಟೆಸ್ಟ್’

ಉಡುಪಿ, ನ.17: ಜಿಲ್ಲೆಯಲ್ಲಿ ಒಟ್ಟು 12 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಈ ಕಾಲೇಜುಗಳಲ್ಲಿ ಒಟ್ಟು 3319 ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿದ್ದು, ಇವರಲ್ಲಿ 1136 ಮಂದಿ ಇಂದು ಕಾಲೇಜುಗಳಿಗೆ ಹಾಜರಾಗಿದ್ದು ಇವರಿಗೆ ತರಗತಿಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಇಂದು ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿರುವ 12 ಸರಕಾರಿ ಕಾಲೇಜುಗಳಿಗೆ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ‘ಲೀಡ್’ ಕಾಲೇಜು ಆಗಿದ್ದು, ಇದರ ಸ್ನಾತಕೋತ್ತರ ವಿಭಾಗದ ಪ್ರಮುಖರಾಗಿರುವ ಡಾ.ದುಗ್ಗಪ್ಪ ಕಜೆಕಾರು ಅವರು ಈ ಕುರಿತು ಮಾಹಿತಿ ನೀಡಿ, ತಮ್ಮ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಒಟ್ಟು 360 ವಿದ್ಯಾರ್ಥಿಗಳು ಕಲಿಯುತಿದ್ದು, ಇವರಲ್ಲಿ ಇಂದು ಒಟ್ಟು 110 ಮಂದಿ ಇಂದು ಕಾಲೇಜಿಗೆ ಬಂದಿದ್ದು, ಅವರಿಗೆಲ್ಲಾ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಇವರೊಂದಿಗೆ 40 ಮಂದಿ ಪ್ರಾದ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಪರೀಕ್ಷೆಗೊಳ ಪಡಿಸಲಾಗಿದೆ. ಇದರ ವರದಿ ಎರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ ಎಂದು ಡಾ.ಕಜೆಕಾರ್ ತಿಳಿಸಿದರು.
ಇದರೊಂದಿಗೆ ಕಾರ್ಕಳ ಸರಕಾರಿ ಕಾಲೇಜಿನಲ್ಲಿ 71, ಹೆಬ್ರಿ-158, ಬೈಂದೂರು-39, ಶಂಕರನಾರಾಯಣ-130, ಕೋಟ ಪಡುಕೆರೆ-6, ಕಾಪು-13, ಮುನಿಯಾಲು-1, ಅಜ್ಜರಕಾಡು-485, ಬಾರಕೂರು-18, ಹಿರಿಯಡ್ಕ-5, ಕೋಟೇಶ್ವರ-0 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆಗೊಳಗಾಗಿದ್ದಾರೆ. ಎಲ್ಲಾ ಕಾಲೇಜುಗಳನ್ನು ಸಂಪೂರ್ಣವಾಗಿ ಸ್ಯಾನಟೈಸ್ ಮಾಡಿದ್ದು, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಇತರ ಸಿಬ್ಬಂದಿಗಳಿಗೆ ಮಾಸ್ಕ್, ಸುರಕ್ಷತಾ ಅಂತರ ಹಾಗೂ ಸ್ಯಾನಟೈಸ್‌ನಲ್ಲಿ ಕೈತೊಳೆಯುವುದನ್ನು ಕಡ್ಡಾಗೊಳಿಸಲಾಗಿದೆ. ಶಿಕ್ಷಕರು ಫೇಸ್ ಕವರ್‌ನ್ನು ಹಾಕಿಕೊಂಡು ಪಾಠ ಮಾಡಬೇಕು ಎಂದರು.
ಸದ್ಯಕ್ಕೆ ಖಾಯಂ ಶಿಕ್ಷಕರು ಮಾತ್ರ ಸರಕಾರಿ ಕಾಲೇಜುಗಳಲ್ಲಿ ಪಾಠ ಮಾಡುವುದರಿಂದ ಅಪರಾಹ್ನದವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಪ್ರತಿ ದಿನ ಕಾಲೇಜು ರೂಮುಗಳನ್ನು ಸ್ಯಾನಟೈಸ್ ಮಾಡಲಾಗುವುದು. ಸರಕಾರದ ಎಲ್ಲಾ ಕೊರೋನ ಮಾರ್ಗಸೂಚಿಗಳನ್ನು ತಪ್ಪದೇ ಪಾಸಲಿಸಿಕೊಂಡು ತರಗತಿ ಗಳನ್ನು ನಡೆಸಲಾಗುವುದು ಎಂದರು.
ಪ್ರಾಧ್ಯಾಪಕರೊಬ್ಬರು ‘ಪಾಸಿಟಿವ್’: ಅಜ್ಜರಕಾಡಿನ ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 849 ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದು, ಇವರಲ್ಲಿ ಇಂದು 485 ಮಂದಿ ಮಾತ್ರ ಕಾಲೇಜಿಗೆ ಹಾಜರಾದರೂ ಕೊರೋನ ಪರೀಕ್ಷೆಗೊಳಗಾದವರು 319 ಮಂದಿ ಮಾತ್ರ. ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದ್ದು ಇದರ ವರದಿ ನಾಳೆ-ನಾಡಿದ್ದು ಬರುವ ನಿರೀಕ್ಷೆ ಇದೆ. ನೆಗೆಟಿವ್ ಬಂದ ವಿದ್ಯಾರ್ಥಿಗಳಿಗೆ ಗುರುವಾರದಿಂದ ಕ್ಲಾಸ್ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾಸ್ಕರ ಶೆಟ್ಟಿ ತಿಳಿಸಿದರು.
ಕಾಲೇಜಿನ 55 ಮಂದಿ ಪ್ರಾಥ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ ಒಬ್ಬ ಪ್ರಾದ್ಯಾಪಕರ ವರದಿ ‘ಪಾಸಿಟಿವ್’ ಬಂದಿದ್ದು, ಅವರನ್ನು ಕೊರೋನ ಚಿಕಿತ್ಸೆಗೆ ಕಳುಹಿಸಲಾಗಿದೆ. ನಮ್ಮ ಕಾಲೇಜಿನಲ್ಲಿ ಶೇ.50ಕ್ಕೂ ಹೆಚ್ಚಿನ ಮಂದಿ ಆನ್‌ಲೈನ್ ಕಲಿಕೆಯನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಡಾ.ಶೆಟ್ಟಿ ತಿಳಿಸಿದರು.
ಕಾಯಂಗೊಂಡಿರುವ ಪ್ರಾಧ್ಯಾಪಕರು ಮಾತ್ರ ಸದ್ಯ ತರಗತಿಗಳನ್ನು ತೆಗೆದು ಕೊಳ್ಳಲಿದ್ದಾರೆ. ಮಧ್ಯಾಹ್ನದವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಬಳಿಕ ಆನ್‌ಲೈನ್ ಶಿಕ್ಷಣ ನಡೆಯಲಿದೆ. ಒಂದು ಬೆಂಚಿನಲ್ಲಿ ಇಬ್ಬರಂತೆ ತರಗತಿಯಲ್ಲಿ ಗರಿಷ್ಠ 40 ಮಂದಿ ವಿದ್ಯಾರ್ಥಿಗಳಿರುತ್ತಾರೆ ಎಂದರು.
ಎಂಜಿಎಂ ಕಾಲೇಜಿನಲ್ಲಿ 4 ಮಂದಿ: ಎಂಜಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಒಟ್ಟು 509 ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಇವರಲ್ಲಿ ಇಂದು ನಾಲ್ವರು ಮಾತ್ರ ಕೋವಿಡ್ ನೆಗೆಟಿವ್ ವರದಿ ಹಾಗೂ ಹೆತ್ತವರ ಒಪ್ಪಿಗೆ ಪತ್ರದೊಂದಿಗೆ ಬಂದು ತರಗತಿಗೆ ಹಾಜರಾದರು. ನಾಲ್ವರಲ್ಲಿ ಮೂವರು ಬಿಎಎಸ್ಸಿ ಹಾಗೂ ಒಬ್ಬರು ಬಿಕಾಂ ವಿದ್ಯಾರ್ಥಿಯಾಗಿದ್ದಾರೆ.
ಕೊರೋನ ಪರೀಕ್ಷೆಗೊಳಗಾಗಿ, ನೆಗೆಟಿವ್ ವರದಿ ಪಡೆದ ಇನ್ನಷ್ಟು ವಿದ್ಯಾರ್ಥಿ ಗಳು ನಾಳೆ, ನಾಡಿದ್ದು ಆಗಮಿಸುವ ಸಾಧ್ಯತೆಗಳಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ದೇವೀದಾಸ್ ನಾಯಕ್ ತಿಳಿಸಿದರು. ಕಾಲೇಜಿನ ಶಿಕ್ಷಕರಿಗೆಲ್ಲಾ ಈಗಾಗಲೇ ಕೋವಿಡ್ ಪರೀಕ್ಷೆ ನಡೆದಿದೆ ಎಂದವರು ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಕಾಂನ ಒಬ್ಬ ವಿದ್ಯಾರ್ಥಿನಿ ಮಾತ್ರ ಇಂದು ತರಗತಿಗೆ ಹಾಜರಾಗಿದ್ದಾರೆ. ನಾಳೆ-ನಾಡಿದ್ದು ಇನ್ನಷ್ಟು ಮಂದಿ ತರಗತಿಗಳಿಗೆ ಹಾಜರಾಗಲು ಬರುವ ನಿರೀಕ್ಷೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ತಿಳಿಸಿದರು.







