ಬಂಧಿತ ಸ್ಟ್ಯಾನ್ ಸ್ವಾಮಿಗೆ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸಲು ಮಧ್ಯಪ್ರವೇಶ: ಎನ್‌ಎಚ್‌ಆರ್‌ಸಿಗೆ ಮನವಿ

ಹೊಸದಿಲ್ಲಿ,ನ.17: ಕೋರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ತಲೋಜಾ ಜೈಲಿನಲ್ಲಿ ಬಂಧನದಲ್ಲಿರುವ ಗಿರಿಜನರ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ(83) ಅವರಿಗೆ ಸೂಕ್ತ ವಸತಿ ಸೇರಿದಂತೆ ಪ್ರಾಥಮಿಕ ಸೌಲಭ್ಯಗಳು ದೊರೆಯುವಂತಾಗಲು ಮಧ್ಯಪ್ರವೇಶ ಮಾಡುವಂತೆ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ (ಎನ್‌ಪಿಆರ್‌ಡಿ)ಯು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಕೋರಿದೆ.
ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿರುವ ಕ್ರೈಸ್ತ ಧರ್ಮಗುರು ಸ್ವಾಮಿ ತನಗೆ ಜೈಲಿನಲ್ಲಿ ಸ್ಟ್ರಾ ಮತ್ತು ಸಿಪ್ಪರ್‌ಗಳನ್ನು ಬಳಸಲು ಅನುಮತಿ ಕೋರಿ ಇತ್ತೀಚಿಗೆ ವಿಶೇಷ ನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದ್ದಾರೆ.
ಸ್ವಾಮಿಯವರ ವಯಸ್ಸು ಮತ್ತು ದೈಹಿಕ ವೈಕಲ್ಯವನ್ನು ಪರಿಗಣಿಸಿ ಅವರಿಗೆ ಜೈಲಿನಲ್ಲಿ ಸೂಕ್ತವಾದ ವಸತಿಯನ್ನು ಕಲ್ಪಿಸಬೇಕು. ಕಾಯಿಲೆಯಿಂದಾಗಿ ಅವರ ಎರಡೂ ಕೈಗಳು ನಡುಗುತ್ತವೆ, ನೀರು ಮತ್ತು ಪಾನೀಯಗಳನ್ನು ಸೇವಿಸಲು ಅವರು ಸ್ಟ್ರಾ ಮತ್ತು ಸಿಪ್ಪರ್ ಬಳಸುತ್ತಾರೆ. ಎನ್‌ಐಎ ಬಂಧಿಸಿದಾಗ ಇವೆರಡೂ ಅವರ ಬಳಿಯಲ್ಲಿದ್ದವು. ಅವುಗಳನ್ನು ಅವರಿಗೆ ಮರಳಿಸಲು ಎನ್‌ಐಎ ನಿರಾಕರಿಸಿತ್ತು. ಈ ಅಗ್ಗದ ಆದರೆ ಅತ್ಯಗತ್ಯ ಸಾಮಗ್ರಿಗಳನ್ನು ಅವರಿಗೆ ಒದಗಿಸಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಕೈಗಳು ನಡುಗುವುದರಿಂದ ಏನನ್ನಾದರೂ ಸೇವಿಸಲು ಅವರಿಗೆ ತೊಂದರೆಯಾಗುತ್ತಿದೆ. ತಾನೇ ಸ್ನಾನ ಮಾಡಲು,ಬಟ್ಟೆಗಳನ್ನು ತೊಳೆಯಲು ಮತ್ತು ನೀರು ತರಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಗಂಭೀರ ಶ್ರವಣ ಸಮಸ್ಯೆಯಿದೆ.
ಇತ್ತೀಚಿಗೆ ಎರಡು ಬಾರಿ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಅವರಿಗೆ ಜೈಲಿನಲ್ಲಿ ಬದುಕು ಕಠಿಣವಾಗುತ್ತಿರಬಹುದು ಎಂದು ಎನ್‌ಎಚ್‌ಆರ್‌ಸಿಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿರುವ ಎನ್‌ಪಿಆರ್‌ಡಿ ಪ್ರ.ಕಾರ್ಯದರ್ಶಿ ಮುರಳೀಧರನ್ ಅವರು, ತಲೋಜಾ ಜೈಲಿಗೆ ತಂಡವೊಂದನ್ನು ಕಳುಹಿಸುವಂತೆ ಮತ್ತು ಸ್ವಾಮಿಯವರ ಸ್ಥಿತಿಯನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಕೋರಿದ್ದಾರೆ. ಜೈಲಿನಲ್ಲಿ ಸ್ವಾಮಿಯವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ ಸಾಕಷ್ಟು ಸೌಲಭ್ಯಗಳಿರುವ ಆಸ್ಪತ್ರೆಗೆ ಅವರನ್ನು ತಕ್ಷಣವೇ ಸ್ಥಳಾಂತರಿಸುವಂತೆಯೂ ಅವರು ಎನ್‌ಎಚ್‌ಆರ್‌ಸಿ ಅಧ್ಯಕ್ಷ ಎಚ್.ಎಲ್.ದತ್ತು ಅವರನ್ನು ಕೋರಿಕೊಂಡಿದ್ದಾರೆ.







