50ಕ್ಕೂ ಅಧಿಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸರಕಾರಿ ಇಂಜಿನಿಯರ್ ಬಂಧನ
ಹೊಸದಿಲ್ಲಿ, ನ. 17: ಕಳೆದ 10 ವರ್ಷಗಳಿಂದ 50ಕ್ಕೂ ಅಧಿಕ ಮಕ್ಕಳ (5ರಿಂದ 16 ವರ್ಷಗಳ ನಡುವಿನ ಮಕ್ಕಳು) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಉತ್ತರಪ್ರದೇಶದ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ರಾಜ್ಯದ ಮೂರು ಜಿಲ್ಲೆಗಳಾದ ಚಿತ್ರಕೂಟ, ಬಾಂಡಾ ಹಾಗೂ ಹಮೀರ್ಪುರದಲ್ಲಿ ಮಕ್ಕಳ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಘಟನೆಯ ವೀಡಿಯೊ ಹಾಗೂ ಭಾವಚಿತ್ರಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಕಿರಿಯ ಇಂಜಿನಿಯರ್ನನ್ನು ಬಂಡಾದಿಂದ ಬಂಧಿಸಲಾಗಿದ್ದು, ಶೀಘ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ನಿವಾಸ ಹಾಗೂ ಇತರ ಸ್ಥಳಗಳ ಮೇಲೆ ದಾಳಿ ನಡೆಸಿದ ಸಂದರ್ಭ 8 ಮೊಬೈಲ್, 8 ಲಕ್ಷ ರೂಪಾಯಿ ನಗದು, ಲೈಂಗಿಕ ಆಟಿಕೆ, ಲ್ಯಾಪ್ಟಾಪ್ ಹಾಗೂ ದೊಡ್ಡ ಪ್ರಮಾಣದ ಮಕ್ಕಳ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸಾಮಗ್ರಿಗಳು ಸೇರಿದಂತೆ ಇತರ ಡಿಜಿಟಲ್ ಸಾಕ್ಷ್ಯಗಳು ದೊರಕಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.