ಕೊರೋನ ನಡುವೆ ಕಾಲೇಜು ಆರಂಭ: ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ, ಜಾಗೃತಿಗೆ ನಿರ್ಧಾರ

ಬೆಂಗಳೂರು, ನ.17: ಕೋವಿಡ್-19ನಿಂದ ಲಾಕ್‍ಡೌನ್‍ನಿಂದ ಕಳೆದ 8 ತಿಂಗಳಿಂದ ಮುಚ್ಚಲ್ಪಟ್ಟಿದ್ದ ಕಾಲೇಜುಗಳು ಇಂದು ರಾಜ್ಯದೆಲ್ಲೆಡೆ ಆರಂಭವಾಗಿತ್ತಾದರು, ಕೋವಿಡ್ ಪರೀಕ್ಷಾ ವರದಿ ಬಾರದಿರುವುದು, ಪೋಷಕರ ಒಪ್ಪಿಗೆ ಪತ್ರ ಇಲ್ಲದಿರುವುದು ಹಾಗೂ ಕೆಲವು ಕಡೆ ಕಾಲೇಜುಗಳಲ್ಲಿ ಸ್ಯಾನಿಟೈಸ್ ಮಾಡುವ ಪ್ರಕ್ರಿಯೆ ಮುಂದುವರಿಯುತ್ತಿದ್ದರಿಂದ ಬಹುತೇಕ ಕಾಲೇಜುಗಳಲ್ಲಿ ತರಗತಿಗಳು ನಡೆಯದಿರುವುದು ಕಂಡುಬಂತು.
ಕಾಲೇಜು ಪ್ರಾರಂಭಕ್ಕೂ ಮುನ್ನ ಕೋವಿಡ್ ಮಾರ್ಗಸೂಚಿಯಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುವ ಮುನ್ನ ಕೋವಿಡ್ ಪರೀಕ್ಷೆ ಕಡ್ಡಾಯವೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಹಿಂದೇಟು ಹಾಕುತ್ತಿರಬಹುದೆಂದು ಸರಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಿಸಿದ್ದಾರೆ.
ಇನ್ನು ಕೊರೋನ ನಡುವೆ ಸ್ನಾತಕೋತ್ತರ, ಪದವಿ, ಡಿಪ್ಲೊಮಾ ಕಾಲೇಜುಗಳ ಅಂತಿಮ ವರ್ಷದ ತರಗತಿಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಕಾಲೇಜುಗಳು ಸ್ಯಾನಿಟೈಸ್‍ನಿಂದ ಸ್ವಚ್ಛಗೊಂಡಿದ್ದವು. ಕಾಲೇಜಿನ ಸುತ್ತಮುತ್ತಲೂ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಡಲಾಗಿತ್ತು. ಹಾಗೂ ಕಾಲೇಜಿನ ಮುಂಭಾಗವೇ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ಇಡಲಾಗಿತ್ತು.
ವಿದ್ಯಾರ್ಥಿಗಳ ಬರುವಿಕೆಗೆ ಕಾಲೇಜುಗಳು ಸಜ್ಜುಗೊಂಡಿದ್ದರೂ ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ನಿರೀಕ್ಷೆಗೆ ತಕ್ಕಂತೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ಕಾಲೇಜುಗಳಲ್ಲಿ ತರಗತಿಗಳು ನಡೆಯಲಿಲ್ಲ. ಆದರೆ, ಕೆಲವು ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಒಂದು ಡೆಸ್ಕ್‍ಗೆ ಇಬ್ಬರು ವಿದ್ಯಾರ್ಥಿಗಳನ್ನು ನಿಯೋಜನೆಗೊಳಿಸುತ್ತಿದ್ದದ್ದು ಕಂಡುಬಂತು.
ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ನಗರದ ಮಹಾರಾಣಿ ಕ್ಲಸ್ಟರ್ ಕಾಲೇಜು ಹಾಗೂ ಆರ್.ಸಿ.ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದಲೇ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಿಸಲಾಗುವುದು. ನೆಗೆಟಿವ್ ಬಂದರೆ ಮಾತ್ರ ಕಾಲೇಜು ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಪಾಸಿಟಿವ್ ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಕೋವಿಡ್ ಮಾರ್ಗಸೂಚಿಯಂತೆ ಹಾಸ್ಟೆಲ್‍ಗಳಲ್ಲೂ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಭಯ, ಆತಂಕ ಪಡುವ ಅಗತ್ಯವಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ತರಗತಿಗಳಿಗೆ ಹಾಜರಾಗಬೇಕೆಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಕಾಲೇಜಿಗೆ ಹಾಜರಾಗಬೇಕು. ಕಾಲೇಜಿಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಸರಕಾರವೇ ತನ್ನ ಹಣದಲ್ಲಿ ಪರೀಕ್ಷೆ ನಡೆಸಲಿದೆ. ಈಗಾಗಲೇ ಆನ್‍ಲೈನ್‍ನಲ್ಲಿ ತರಗತಿಗಳು ಆರಂಭವಾಗಿರುವುದರಿಂದ ಕಾಲೇಜುಗಳ ಪಠ್ಯಕ್ರಮದಲ್ಲಿ ಕಡಿತ ಆಗುವುದಿಲ್ಲ.
-ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಸರಕಾರಿ ಕಲಾ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಸುಮಾರು 800ಕ್ಕೂ ಹೆಚ್ಚು ಮಂದಿ ಇದ್ದಾರೆ. ಆದರೆ, ಕಾಲೇಜಿಗೆ ಸುಮಾರು 200ವಿದ್ಯಾರ್ಥಿಗಳು ಬಂದಿದ್ದರು. ಅವರಲ್ಲಿ ಬಹುತೇಕ ಬಂದಿ ಕೋವಿಡ್ ಟೆಸ್ಟ್ ಮಾಡಿಸಿರಲಿಲ್ಲ. ಹೀಗಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳಿಗೆ ಬಿಬಿಎಂಪಿ ವತಿಯಿಂದ ನಾಳೆಯಿಂದ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ.
-ಮಹೇಶ್, ಪ್ರಾಧ್ಯಾಪಕರು, ಸರಕಾರಿ ಕಲಾ ಕಾಲೇಜು
ನಾನು ಕೋವಿಡ್ ಟೆಸ್ಟ್ ಮಾಡಿಸಿದ್ದು, ನೆಗೆಟಿವ್ ಬಂದಿದೆ. ನನ್ನ ಬಹುತೇಕ ಸ್ನೇಹಿತರು ಟೆಸ್ಟ್ ಮಾಡಿಸಿಲ್ಲ. ಹಾಗೂ ಹೆಚ್ಚು ಮಂದಿ ಕಾಲೇಜಿಗೆ ಬಂದಿಲ್ಲ. ತುಂಬಾ ದಿನಗಳ ನಂತರ ಕಾಲೇಜನ್ನು ಹಾಗೂ ಸ್ನೇಹಿತರನ್ನು ನೋಡಿ ಖಷಿಯಾಯಿತು.
-ಮಂಜುನಾಥ್, ಬಿಎ ವಿದ್ಯಾರ್ಥಿ, ಸರಕಾರಿ ಕಲಾ ಕಾಲೇಜು







