ಮೈಷುಗರ್ ಉಳಿವಿಗೆ ರೈತರು ಬೀದಿಗಿಳಿಯಲೇಬೇಕು: ಸುನಂದಾ ಜಯರಾಂ
ಹೊರಗುತ್ತಿಗೆ ತೀರ್ಮಾನ ಕೈಬಿಡಲು ಸರಕಾರಕ್ಕೆ ಆಗ್ರಹ

ಮಂಡ್ಯ, ನ.17: ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ರೈತರು ಬೀದಿಗಿಳಿದು ಸರಕಾರದ ಮೇಲೆ ಒತ್ತಡ ತರಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರಾದ ಸುನಂದಾ ಜಯರಾಂ ಮನವಿ ಮಾಡಿದ್ದಾರೆ.
ರೈತ ಹಿತರಕ್ಷಣಾ ಸಮಿತಿ, ದಲಿತ, ಕಾರ್ಮಿಕ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರು ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತುಬಿಟ್ಟರೆ ಬೆಳಗೊಳ, ಅಸಿಟೇಟ್, ಮಂಡ್ಯ ಕೆರೆಗೆ ಬಂದ ಸ್ಥಿತಿ ಮೈಷುಗರಿಗೂ ಬರುತ್ತದೆ ಎಂದು ಎಚ್ಚರಿಸಿದರು.
ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲು ಯಾವುದೇ ಸ್ವಾರ್ಥವಿಲ್ಲದೆ ಹೋರಾಟ ನಡೆಸುತ್ತಿದ್ದೇವೆ. ಈ ಹೊತ್ತಿಗೆ ಜಿಲ್ಲೆಯ ರೈತರು ದಂಗೆ ಏಳಬೇಕಿತ್ತು. ಆದರೆ, ಏನು ಕಾರಣವೋ ಗೊತ್ತಿಲ್ಲ. ಜಿಲ್ಲೆಯ ಮತ್ತು ರಾಜ್ಯದ ಚುನಾಯಿತ ಜನಪ್ರತಿನಿಧಿಗಳೂ ಜಾಣ ಮೌನಕ್ಕೆ ಜಾರಿದ್ದಾರೆ ಎಂದು ಅವರು ವಿಷಾದಿಸಿದರು.
ಸರಕಾರಿ ಸ್ವಾಮ್ಯದ ಏಕೈಕ ಮೈಷುಗರ್ ಕಾರ್ಖಾನೆಯನ್ನು ಸರಕಾರವೇ ನಡೆಸಬೇಕೆಂದು ಒತ್ತಾಯಿಸುತ್ತಾ ಬಂದಿದ್ದರೂ, ಸರಕಾರ ಕಿವಿಗೊಡದೆ ಹೊರಗುತ್ತಿಗೆ ನೀಡಲು ತೀರ್ಮಾನಿಸಿದೆ. ಇದು ಜಿಲ್ಲೆಯ ರೈತರು ಹಾಗೂ ಕಾರ್ಮಿಕರಿಗೆ ಬಗೆದ ದ್ರೋಹವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಸರಕಾರಿ ಸ್ವಾಮದ್ಯದ ಸಕ್ಕರೆ ಕಾರ್ಖಾನೆಯನ್ನು ನಡೆಸಲು ಸಾಧ್ಯವಿಲ್ಲದ ಸರಕಾರ, ಮಂತ್ರಿಗಳಿಗೆ ಅಧಿಕಾರದಲ್ಲಿ ಇರಲು ನೈತಿಕತೆ ಇದೆಯೇ ಎಂದು ತರಾಟೆಗೆ ತೆಗೆದುಕೊಂಡ ಅವರು, ಕೂಡಲೇ ಸರಕಾರ ಹೊರಗುತ್ತಿಗೆ ತೀರ್ಮಾನ ಕೈಬಿಟ್ಟು ಸರಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್, ಮಾತನಾಡಿ, ಸರಕಾರವೇ ರಚಿಸಿದ ಸಮಿತಿಯೇ ಕಾರ್ಖಾನೆಯನ್ನು ಸರಕಾರವೇ ನಡೆಸಬೇಕೆಂದು ವರದಿ ಕೊಟ್ಟಿದೆ. ಆದರೆ, ತಾನು ರೈತನ ಮಗನೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪ ಗುತ್ತಿಗೆ ಕೊಡಲು ಹೊರಟಿದ್ದಾರೆಂದು ಕಿಡಿಕಾರಿದರು.
ಯಾವ ಆಧಾರದ ಮೇಲೆ ಗುತ್ತಿಗೆ ನೀಡಲಾಗುತ್ತಿದೆ ಎಂಬುದರ ಮಾಹಿತಿ ನೀಡಬೇಕು. ಜಿಲ್ಲೆಯ ಶಾಸಕರು ಮೌನ ಬಿಟ್ಟು ಹೊರಬರಬೇಕು. ಇದರಲ್ಲಿ ವಿಪಕ್ಷದವರ ಜವಾಬ್ಧಾರಿಯೂ ಇದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರ್ಖಾನೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರೈತಸಂಘದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಸುಧೀರ್‍ಕುಮಾರ್, ಸಿಐಟಿಯುನ ಕೆ.ಕುಮಾರಿ ಹಾಗೂ ವಿಮೋಚನಾ ಸಂಘಟನೆಯ ಜನಾರ್ಧನ್ ಉಪಸ್ಥಿತರಿದ್ದರು.







