ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದರೂ ಅಡಿಲೇಡ್ ನಲ್ಲಿ ಟೆಸ್ಟ್ ಆಯೋಜಿಸಲು ಸಿಎ ಪ್ರಯತ್ನ

ಸಿಡ್ನಿ, ನ.17: ದಕ್ಷಿಣ ಆಸ್ಟ್ರೇಲಿಯದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಆಟಗಾರರನ್ನು ದಕ್ಷಿಣ ಆಸ್ಟ್ರೇಲಿಯದಿಂದ ಹೊರಹಾಕಿದರೂ ಮುಂದಿನ ತಿಂಗಳು ಆಡಿಲೇಡ್‌ನಲ್ಲಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಇನ್ನೂ ಯೋಜಿಸುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ (ಸಿಎ)ಹೇಳಿದೆ.
21 ಮಂದಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟ ಬಳಿಕ ದಕ್ಷಿಣ ಆಸ್ಟ್ರೇಲಿಯ ಸೋಮವಾರ ಸಾಮಾಜಿಕ ದೂರ ನಿರ್ಬಂಧಗಳನ್ನು ಪುನಃ ಜಾರಿಗೊಳಿಸಿತು. ಇದರ ಬೆನ್ನಲ್ಲೇ ನೆರೆಯ ರಾಜ್ಯಗಳು ದಕ್ಷಿಣ ಆಸ್ಟ್ರೇಲಿಯದೊಂದಿಗಿನ ಗಡಿಗಳನ್ನು ಮುಚ್ಚಲು ಪ್ರಾರಂಭಿಸಿದವು. ಇದೇ ವೇಳೆ ಕ್ರಿಕೆಟ್ ಆಸ್ಟ್ರೇಲಿಯ ತಮ್ಮ ಟ್ವೆಂಟಿ -20 ಮತ್ತು ಏಕದಿನ ತಂಡಗಳ ಆಟಗಾರರನ್ನು ಸಿಡ್ನಿಗೆ ಸ್ಥಳಾಂತರಿಸಿತು.
ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಆರು ಸೀಮಿತ ಓವರ್‌ಗಳ ಪಂದ್ಯಗಳಿಗೆ ಭಾರತದ ತಂಡವು ಈಗಾಗಲೇ ಸಿಡ್ನಿಯಲ್ಲಿ ಕ್ವಾರಂಟೈನ್‌ನಲ್ಲಿದೆ. ಸೀಮಿತ ಓವರ್‌ಗಳ ಸರಣಿ ಮುಗಿದ ಬಳಿಕ ನಾಲ್ಕು ಟೆಸ್ಟ್ ಸರಣಿ ಡಿಸೆಂಬರ್ 17 ರಂದು ಅಡಿಲೇಡ್ ಓವಲ್‌ನಲ್ಲಿ ಪ್ರಾರಂಭವಾಗಲಿದೆ.
ಸಿಡ್ನಿಯಲ್ಲಿ ಮೊದಲ ಟೆಸ್ಟ್ ಆಡಲು ಬದ್ಧವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿಕೆಯಲ್ಲಿ ತಿಳಿಸಿದೆ.
‘‘ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಸವಾಲುಗಳನ್ನು ಎದುರಿಸುವಲ್ಲಿ ನಾವು ಚುರುಕಾಗಿರುತ್ತೇವೆ ಮತ್ತು ಆತಿಥ್ಯ ವಹಿಸುವುದರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವಿಶ್ವಾಸ ಹೊಂದಿದ್ದೇವೆ ’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.







