ಬೇರೆ ಪಕ್ಷ ಸೇರಿಕೊಳ್ಳಿ ಇಲ್ಲವೇ ಹೊಸ ಪಕ್ಷ ರಚಿಸಿ: ಕಪಿಲ್ ಸಿಬಲ್ ಗೆ ಚೌಧರಿ ತಿರುಗೇಟು
ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಆಂತರಿಕ ಸಂಘರ್ಷ

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವನ್ನು ಟೀಕಿಸುವವರು ಮುಜುಗರದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬದಲು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿ ಇಲ್ಲವೇ ಸ್ವಂತ ಪಕ್ಷವನ್ನು ರಚಿಸಿಕೊಳ್ಳಿ ಎಂದು ಹೇಳಿರುವ ಕಾಂಗ್ರೆಸ್ ಉನ್ನತ ನಾಯಕರೊಬ್ಬರು ಹಿರಿಯ ನಾಯಕ ಕಪಿಲ್ ಸಿಬಲ್ ಸೇರಿ ಅಸಮಾಧಾನ ಹೊರ ಹಾಕಿದವರಿಗೆ ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧಿರ್ ರಂಜನ್ ಚೌಧರಿ "ಬಹಿರಂಗವಾಗಿ ಟೀಕಿಸುತ್ತಿರುವವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಆತ್ಮೀಯರಾಗಿದ್ದು, ಅವರೊಂದಿಗೆ ಮುಕ್ತವಾಗಿ ತಮ್ಮ ಧ್ವನಿ ಎತ್ತಬಹುದು ಕೆಲವು ನಾಯಕರು ಕಾಂಗ್ರೆಸ್ ತಮಗೆ ಸರಿಯಾದ ಪಕ್ಷವಲ್ಲ ಎಂದು ಭಾವಿಸಿದರೆ ಅಂತಹವರು ಹೊಸ ಪಕ್ಷ ಸ್ಥಾಪಿಸಬಹುದು ಅಥವಾ ಪ್ರಗತಿಪರ ಎಂದು ಭಾವಿಸುವ ಹಾಗೂ ಅವರ ಹಿತಾಸಕ್ತಿಗೆ ಅನುಗುಣವಾಗಿ ಬೇರೆ ಯಾವುದೇ ಪಕ್ಷವನ್ನು ಸೇರಬಹುದು. ಆದರೆ ಅವರು ಅಂತಹ ಮುಜುಗರದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಇದು ಕಾಂಗ್ರೆಸ್ ನ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತದೆ'' ಎಂದು ಹೇಳಿದರು.
ಬಿಹಾರ ಚುನಾವಣೆಯ ಸಂದರ್ಭ ಈ ನಾಯಕರು ಎಲ್ಲಿದ್ದರು ಎಂದು ಪ್ರಶ್ನಿಸಿದ ಚೌಧರಿ, "ಅಂತಹ ನಾಯಕರು ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವ ಕುರಿತು ಗಂಭೀರವಾಗಿದ್ದರೆ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸಬೇಕು. ಇತ್ತೀಚೆಗಿನ ಬಿಹಾರ ಚುನಾವಣೆಯ ಸಂದರ್ಭದಲ್ಲಿ ಅವರು ಪಕ್ಷಕ್ಕಾಗಿ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಲು ಮುಂದಾಗಿದ್ದಾರೆಯೇ'' ಎಂದು ಪ್ರಶ್ನಿಸಿದರು.





